ADVERTISEMENT

ಹಾವೇರಿ: ಕೈದಿಗಳ ಮನ ಪರಿವರ್ತನೆಗೆ ‘ಕೃಷಿ ಕಾಯಕ’

ಜಿಲ್ಲಾ ಕಾರಾಗೃಹದ 4 ಎಕರೆಯಲ್ಲಿ ತರಕಾರಿ | 5 ಎಕರೆಯಲ್ಲಿ ಮಾವು ಸಸಿ ನೆಡಲು ತಯಾರಿ | ಅಡುಗೆ ಖರ್ಚಿನಲ್ಲಿ ವಾರ್ಷಿಕ ಲಕ್ಷ ರೂಪಾಯಿ ಉಳಿಕೆ

ಸಂತೋಷ ಜಿಗಳಿಕೊಪ್ಪ
Published 6 ಡಿಸೆಂಬರ್ 2025, 2:18 IST
Last Updated 6 ಡಿಸೆಂಬರ್ 2025, 2:18 IST
ಹಾವೇರಿ ಸಮೀಪದ ಕೇರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದ ಹೊರನೋಟ
ಹಾವೇರಿ ಸಮೀಪದ ಕೇರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದ ಹೊರನೋಟ   

ಹಾವೇರಿ: ಅಪರಾಧ ಪ್ರಕರಣಗಳ ಆರೋಪಿಗಳು ಹಾಗೂ ಅಪರಾಧಿಗಳ ಮನ ಪರಿವರ್ತನೆಯ ತಾಣವಾಗಿರುವ ಹಾವೇರಿ ಜಿಲ್ಲಾ ಕಾರಾಗೃಹ, ಇದೀಗ ಕೃಷಿ ಕಾಯಕದಿಂದ ಇತರೆ ಕಾರಾಗೃಹಕ್ಕೆ ಮಾದರಿಯಾಗುತ್ತಿದೆ. 

ಕಾರಾಗೃಹದ 4 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ–ಸೊಪ್ಪುಗಳನ್ನು ಬೆಳೆಯಲಾಗುತ್ತಿದೆ. 5 ಎಕರೆ ಜಮೀನಿನಲ್ಲಿ ವಾರ್ಷಿಕವಾಗಿ ಲಾಭ ನೀಡುವ ಮಾವು ಸಸಿಗಳನ್ನು ನೆಡಲು ತಯಾರಿ ನಡೆಸಿದೆ.

ಜಿಲ್ಲಾ ಕೇಂದ್ರ ಹಾವೇರಿಯಿಂದ 8 ಕಿ.ಮೀ. ದೂರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸದ್ಯ 178 ಕೈದಿಗಳಿದ್ದಾರೆ. ಇವರೆಲ್ಲರಿಗೂ ಜೈಲಿನಲ್ಲಿಯೇ ಉಪಾಹಾರ ಹಾಗೂ ಊಟ ಸಿದ್ಧಪಡಿಸಲಾಗುತ್ತಿದೆ. ಅಡುಗೆ ತಯಾರಿಸಲು, ಜೈಲಿನಲ್ಲಿಯೇ ಬೆಳೆದಿರುವ ತರಕಾರಿ ಹಾಗೂ ಸೊಪ್ಪು ಬಳಕೆ ಮಾಡಲಾಗುತ್ತಿದೆ.

ADVERTISEMENT

ಅಡುಗೆಗೆ ಬೇಕಾದ ಕಿರಾಣಿ ಹಾಗೂ ಸಣ್ಣ–ಪುಟ್ಟ ವಸ್ತುಗಳನ್ನು ಮಾತ್ರ ಮಾರುಕಟ್ಟೆಯಿಂದ ತರಲಾಗುತ್ತಿದೆ. ಅದನ್ನು ಹೊರತುಪಡಿಸಿ ಮೆಣಸಿನಕಾಯಿ, ಚವಳೆಕಾಯಿ, ಬೆಂಡಿಕಾಯಿ, ತುಪ್ಪರಿಕಾಯಿ, ಹಿರೇಕಾಯಿ, ಸೌತೆಕಾಯಿ, ಟೊಮೆಟೊ, ಬದನೆಕಾಯಿ ತರಕಾರಿಯನ್ನು ಜೈಲಿನಲ್ಲಿಯೇ ಬೆಳೆಯಲಾಗುತ್ತಿದೆ. ಇದರ ಜೊತೆಗೆ ಕೊತಂಬರಿ, ಪಾಲಕ್, ಮೆಂತೆ, ಮೂಲಂಗಿ ಹಾಗೂ ಇತರೆ ಸೊಪ್ಪುಗಳನ್ನು ಸಹ ಕೈದಿಗಳೇ ಬೆಳೆಯುತ್ತಿದ್ದಾರೆ.

ಜಿಲ್ಲೆಯ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಸಂದರ್ಭದಲ್ಲಿ, ಇದೇ ಕಾರಾಗೃಹದಲ್ಲಿ ಇರಿಸಲಾಗುತ್ತದೆ. ಕಾರಾಗೃಹ ಬಂಧಿಗಳಿಗೆ, ನಿಯಮಗಳ ಪ್ರಕಾರ ಉಪಾಹಾರ–ಊಟ ನೀಡಬೇಕು. ಹೀಗಾಗಿ, ಅಡುಗೆಗೆ ಬೇಕಾದ ತರಕಾರಿ ಹಾಗೂ ಸೊಪ್ಪು ಬೆಳೆಯಲು ಜೈಲಿನಲ್ಲಿಯೇ ‘ಕೃಷಿ ಕಾಯಕ’ ಮಾಡಲಾಗುತ್ತಿದೆ.

2008ರಲ್ಲಿ ಕೇರಿಮತ್ತಿಹಳ್ಳಿ ಬಳಿ ಈ ಕಾರಾಗೃಹ ಆರಂಭವಾಗಿದೆ. ಆರಂಭದ ದಿನಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿತ್ತು. ಕಾರಾಗೃಹದ ಅಕ್ಕ–ಪಕ್ಕದಲ್ಲಿದ್ದ ಸುಮಾರು 15 ಎಕರೆ ಜಮೀನು ಪಾಳು ಬಿದ್ದಿತ್ತು. ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ತರಕಾರಿ, ಹಣ್ಣು ಹಾಗೂ ಸೊಪ್ಪು ಬೆಳೆಯುವ ಕಾಯಕ ಆರಂಭವಾಯಿತು.

ಸ್ವಲ್ಪ ಜಾಗದಲ್ಲಿ ಆರಂಭವಾದ ಕೃಷಿ ಕಾಯಕ ಈಗ 4 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಕಾರಾಗೃಹದಲ್ಲಿರುವ ನಂಬಿಕಸ್ಥ ಕೈದಿಗಳ ನೇತೃತ್ವದಲ್ಲಿಯೇ ಕೃಷಿ ಕೆಲಸಗಳು ನಡೆಯುತ್ತಿವೆ. ನಿತ್ಯದ ಶ್ರಮದಿಂದ ಬೆಳೆದಿರುವ ತರಕಾರಿ–ಸೊಪ್ಪು ಈಗ ಕಾರಾಗೃಹದ ಕೈದಿಗಳ ಊಟಕ್ಕೆ ಆಸರೆಯಾಗಿದೆ.

‘ಜೈಲಿನ 4 ಎಕರೆ ಪ್ರದೇಶದಲ್ಲಿ ತರಕಾರಿ, ಸೊಪ್ಪು ಬೆಳೆಯುತ್ತಿದ್ದೇವೆ. ಕಾರಾಗೃಹಕ್ಕೆ ಸಾಕಾಗುವಷ್ಟು ತರಕಾರಿ–ಸೊಪ್ಪು ಸಿಗುತ್ತಿದೆ. ಇದನ್ನೇ ಅಡುಗೆ ತಯಾರಿಗೆ ಬಳಸುತ್ತಿದ್ದೇವೆ. ಅಡುಗೆ ಖರ್ಚಿಗೆ ಸರ್ಕಾರ ನೀಡುವ ಹಣದಲ್ಲಿ ವಾರ್ಷಿಕ ₹ 1 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಉಳಿಸಿ ಸರ್ಕಾರಕ್ಕೆ ವಾಪಸು ಜಮೆ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ನಾಗರತ್ನಮ್ಮಾ ವೈ.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೈದಿಗಳ ಮನಪರಿವರ್ತನೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಕೃಷಿ ಕಾಯಕವೂ ಒಂದು. ಕೈದಿಗಳಲ್ಲಿಯೇ ನಂಬಿಕಸ್ಥರು ಹಾಗೂ ಘೋರ ಅಪರಾಧ ಹಿನ್ನೆಲೆ ಇರದ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಕೃಷಿ ಕೆಲಸಕ್ಕೆ ನಿಯೋಜಿಸುತ್ತಿದ್ದೇವೆ. ಸರ್ಕಾರ ನಿಗದಿಪಡಿಸಿರುವ ಕೂಲಿ ಹಣವನ್ನೂ ಕೈದಿಗಳಿಗೆ ಕೊಡುತ್ತಿದ್ದೇವೆ’ ಎಂದರು.

‘ಜಮೀನು ಉಳುಮೆ, ಬಿತ್ತನೆಯಿಂದ ಹಿಡಿದು ಕಟಾವಿನ ವರೆಗಿನ ಎಲ್ಲ ಕೆಲಸಗಳನ್ನು ಕೈದಿಗಳು ಮಾಡುತ್ತಿದ್ದಾರೆ. ಸಿಬ್ಬಂದಿಯೂ ಸಹಕಾರ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಕಾರಾಗೃಹವು, ತರಕಾರಿ ಬಳಕೆಯಲ್ಲಿ ಸ್ವಾವಲಂಬಿ ಆಗಿದೆ’ ಎಂದು ಹೇಳಿದರು.

5 ಎಕರೆಯಲ್ಲಿ ಮಾವು ಸಸಿ: ‘4 ಎಕರೆ ಜಮೀನಿನಲ್ಲಿ ಈಗಾಗಲೇ ತರಕಾರಿ–ಸೊಪ್ಪು ಬೆಳೆಯಿದೆ. ಈಗ ಜೈಲಿನ 5 ಎಕರೆ ಜಮೀನಿನಲ್ಲಿ ಮಾವಿನ ಸಸಿ ನೆಡಲು ತೀರ್ಮಾನಿಸಲಾಗಿದೆ. ಆಲದಕಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಮಾವು ಸಸಿ ನೆಡುವ ಪ್ರಕ್ರಿಯೆ ಆರಂಭವಾಗಿದೆ. ಎಲ್ಲೆಲ್ಲಿ ಸಸಿ ನೆಡಬೇಕೆಂದು ಗುರುತು ಮಾಡಲಾಗಿದೆ. ಸಸಿ ನೆಡುವ ಕೆಲಸ ಜೂನ್‌ನಲ್ಲಿ ಆರಂಭವಾಗಲಿದೆ’ ಎಂದು ನಾಗರತ್ನಮ್ಮಾ ಹೇಳಿದರು.

‘ಅಲ್ಫಾನ್ಸೊ ಹಾಗೂ ಮಲ್ಲಿಕಾ ತಳಿಯ ಮಾವಿನ ಸಸಿ ನೆಡಲಾಗುತ್ತಿದೆ. ಐದು ಎಕರೆ ಪ್ರದೇಶದಲ್ಲಿ ಮಾವು ಗಿಡಗಳು ಬೆಳೆದು, ಹಣ್ಣು ಕಟಾವು ಆರಂಭವಾದರೆ ಜೈಲಿಗೆ ಮತ್ತಷ್ಟು ಆರ್ಥಿಕ ಬಲ ಬರಲಿದೆ’ ಎಂದರು. 

ಹಾವೇರಿ ಜಿಲ್ಲಾ ಕಾರಾಗೃಹದ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾದ ಕೈದಿ
ಹಾವೇರಿ ಜಿಲ್ಲಾ ಕಾರಾಗೃಹದ ಜಮೀನಿನಲ್ಲಿ ಬೆಳೆದಿರುವ ತರಕಾರಿ–ಸೊಪ್ಪು

ಕೇರಿಮತ್ತಿಹಳ್ಳಿಯಲ್ಲಿರುವ ಕಾರಾಗೃಹ ಮಾವು ಸಸಿ ನೆಡಲು ಜಮೀನಿನಲ್ಲಿ ಗುರುತು

ಜೈಲಿನಲ್ಲಿಯೇ ತರಕಾರಿ–ಸೊಪ್ಪು ಬೆಳೆಯುವುದರಿಂದ ಪ್ರತಿ ತಿಂಗಳು ₹9 ಸಾವಿರದಿಂದ ₹ 10 ಸಾವಿರ ಉಳಿಯುತ್ತಿದೆ. ಅದನ್ನು ಸರ್ಕಾರಕ್ಕೆ ವಾಪಸು ಜಮೆ ಮಾಡುತ್ತಿದ್ದೇವೆ
ನಾಗರತ್ನಮ್ಮಾ ವೈ.ಡಿ. ಅಧೀಕ್ಷಕಿ ಹಾವೇರಿ ಜಿಲ್ಲಾ ಕಾರಾಗೃಹ

ಕಾರಾಗೃಹದ ಸ್ವಚ್ಛತೆಗೆ ಆದ್ಯತೆ

ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಈ ಹಿಂದೆ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ಈಗ ಪ್ರತಿಯೊಂದು ಕೊಠಡಿಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಕಾರಾಗೃಹದೊಳಗೆ ಕಾಲಿಡುತ್ತಿದ್ದಂತೆ ಸ್ವಚ್ಛತೆ ಹೇಗಿದೆ ? ಎಂಬುದು ಕಣ್ಣಿಗೆ ಕಾಣುತ್ತದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲಿಗೆ ಬರುವ ಕೈದಿಗಳಿಗೆ ಕಾರಾಗೃಹವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ. ಸಿಬ್ಬಂದಿ ಪ್ರತಿ ಬಾರಿಯೂ ಗಸ್ತು ತಿರುಗಿ ಪ್ರತಿಯೊಬ್ಬ ಕೈದಿಗಳ ವರ್ತನೆ ಮೇಲೆ ಕಣ್ಣಿಟ್ಟಿದ್ದಾರೆ. ಯಾರಾದರೂ ಗಲೀಜು ಮಾಡಿದರೆ ಸ್ಥಳದಲ್ಲಿಯೇ ಅವರಿಗೆ ಸ್ವಚ್ಛತೆ ಪಾಠ ಕಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.