
ಹಾವೇರಿ: ಹಿಂದೂ ಧರ್ಮದವರ ಮನೆಗೆ ತೆರಳಿ ಹಣದ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿ ಜೀವ ಬೆದರಿಕೆಯೊಡ್ಡಿರುವ ಆರೋಪದಡಿ ‘ಕ್ರಿಸ್ತನ ರಾಜ ಸುವರ್ತೆ ಸಂಸ್ಥೆ’ಯ ಪದಾಧಿಕಾರಿಗಳು ಹಾಗೂ ಇತರರ ವಿರುದ್ಧ ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಇಜಾರಿ ಲಕಮಾಪುರದ ಹಲವು ಮನೆಗಳಿಗೆ ಭೇಟಿ ನೀಡಿದ್ದ ಆರೋಪಿಗಳ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು, ಶ್ರೀರಾಮಸೇನೆ ಹಾಗೂ ಬಜರಂಗದಳದ ಪದಾಧಿಕಾರಿಗಳಿಗೆ ವಿಷಯ ತಲುಪಿಸಿದ್ದರು. ನಂತರ, ಎಲ್ಲರೂ ಸೇರಿ ಮನೆಗೆ ಹೋಗಿ ಪುರಾವೆ ಸಮೇತವೇ ಆರೋಪಿಗಳನ್ನು ಹಿಡಿದುಕೊಂಡಿದ್ದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು, ಮಾಹಿತಿ ಪಡೆದುಕೊಂಡರು. ನಂತರ, ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಕ್ರಿಸ್ತನ ರಾಜ ಸುವರ್ತೆ ಸಂಸ್ಥೆಯ ಕೆಲವರನ್ನು ವಶಕ್ಕೆ ಪಡೆದು ಕರೆದೊಯ್ದರು.
ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ ಹಾಗೂ ಮತಾಂತರ ಆಗದಿದ್ದಕ್ಕೆ ಜೀವ ಬೆದರಿಕೆ ಆರೋಪದಡಿ ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳಾದ ಬಸವರಾಜ ಹಳ್ಳಿಕೇರಿ, ಹನುಮಂತಪ್ಪ ಹಳ್ಳಿಕೇರಿ, ಸೋಮಕ್ಕ ಬಂಡಿವಡ್ಡರ, ತಿಮ್ಮಕ್ಕ ವಡ್ಡರ, ಗದ್ದೆಕ್ಕ ನಾಕಪೂರ, ಲಕ್ಷ್ಮಿ ಬಂಡಿವಡ್ಡರ, ಅನುಸೂಯಾ, ಲಕ್ಷ್ಮಿ ಹಳ್ಳಿಕೇರಿ, ಸರಸ್ವತಿ ಹಳ್ಳಿಕೇರಿ, ಪ್ರೇಮಾ, ಸುನೀತಾ, ಮಂಜು, ರವಿ, ಪ್ರಭು ಶ್ಯಾಮವಲ್, ಸಂತೋಷ ನೂಕಾಪುರ, ಸಲುಮಿಯಾ, ಸೌಭಾಗ್ಯ, ರಾಮು ಪರಶುರಾಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘ಮಾ. 1ರಂದು ಇಜಾರಿ ಲಕಮಾಪುರದಲ್ಲಿರುವ ಬಸವರಾಜ ಹಳ್ಳಿಕೇರಿ ಅವರ ಮನೆಯಲ್ಲಿ ಆರೋಪಿಗಳು ಸೇರಿದ್ದರು. ದೂರುದಾರರನ್ನು ಮನೆಯಲ್ಲಿ ಭೇಟಿಯಾಗಿದ್ದರು. ಸಂಸ್ಥೆಯಿಂದ ಹಣ ನೀಡುವುದಾಗಿ ಹೇಳಿದ್ದ ಆರೋಪಿಗಳು, ನಿತ್ಯವೂ ಏಸು ಕ್ರಿಸ್ತನ ಪ್ರಾರ್ಥನೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಪ್ರಾರ್ಥನೆ ಮಾಡಿದರೆ, ಮನೆ ಕಟ್ಟಲು ಹಣ ನೀಡುವುದಾಗಿಯೂ ಆಮಿಷವೊಡ್ಡಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಸೇರದಿದ್ದರೆ, ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಮನೆಯಲ್ಲಿ ಕಾರ್ಯಕ್ರಮ: ‘ಕ್ರಿಸ್ತನ ರಾಜ ಸುವರ್ತೆ ಸಂಸ್ಥೆ’ಯ ಹೆಸರಿನಲ್ಲಿ ಮನೆ ಮನೆಗೆ ಹೋಗುತ್ತಿರುವ ಆರೋಪಿಗಳು, ಹಿಂದೂ ಧರ್ಮದ ಜನರಿಗೆ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಇದುವರೆಗೂ ನಗರದ 20ಕ್ಕೂ ಹೆಚ್ಚು ಕುಟುಂಬಗಳನ್ನು ಮತಾಂತರ ಮಾಡಿರುವ ಮಾಹಿತಿಯಿದೆ. ಮಾ. 1ರಂದು ಹಳ್ಳಿಕೇರಿ ಅವರ ಮನೆಯಲ್ಲಿ ಎಲ್ಲರೂ ಸೇರಿ ಚಿಕ್ಕ ಕಾರ್ಯಕ್ರಮ ಮಾಡಿ, ಮತಾಂತರ ಮಾಡಲು ಯತ್ನಿಸುತ್ತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಶ್ರೀರಾಮಸೇನೆ ಹಾಗೂ ಬಜರಂಗದಳದ ಕಾರ್ಯಕರ್ತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.