ಶಿಗ್ಗಾವಿ: ಪಟ್ಟಣದಲ್ಲಿ ನಿರ್ಮಾಣವಾದ ಜಿ ಪ್ಲಸ್ 1 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಜಿ ಪ್ಲಸ್ 1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಶಾಸಕ ಯಾಸಿರ್ ಅಹ್ಮದಖಾನ್ ಪಠಾಣ ಅವರಿಗೆ ಮನವಿ ಸಲ್ಲಿಸಿದರು.
ವಸತಿ ಸೌಲಭ್ಯಕ್ಕಾಗಿ ಪುರಸಭೆ ವಂತಿಗೆ ಕಟ್ಟಿರುವ ಬಡ ಫಲಾನುಭವಿಗಳಿಗೆ 12 ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಜಿ+1 ಮನೆಗಳನ್ನು ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮನೆಗಳ ಬಾಗಿಲುಗಳ ಬೀಗ ತೆಗೆದುಕೊಂಡು ವಾಸ ಮಾಡಲು ಆರಂಭಿಸುತ್ತೇವೆ. ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಕ್ರೋಶ ವ್ಯಕ್ತ ಪಡಿಸಿದರು.
ಮನೆ ಸಿಗುವ ಆಸೆಯಿಂದ ಸಾಲ ಮಾಡಿ ಮನೆ ಕಂತು ತುಂಬಿದ್ದಾರೆ. ಮನೆ ಸಿಗಬಹುದು ಎಂದು 12 ವರ್ಷದವರೆಗೆ ಮನೆ ಬಾಡಿಗೆ ಕಟ್ಟುತ್ತಾ ಬಂದಿದ್ದಾರೆ. ಆದರೆ ಈಗ ಇತ್ತ ಮನೆ ಸಿಗುತ್ತಿಲ್ಲ. ಅತ್ತ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಡೀ ಕುಟುಂಬ ಬೀದಿಗೆ ಬೀಳುವಂತಾಗಿದೆ. ಆದರು ಸಹ ಅಧಿಕಾರಿಗಳು ಈಕಡೆ ಗಮನಿಸುತ್ತಿಲ್ಲ ಎಂದು ಅಳಲು ವ್ಯಕ್ತ ಪಡಿಸಿದರು.
ಸಂಸದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಉದ್ಘಾಟನೆ ಕೂಡ ಮಾಡಿದ್ದಾರೆ. ಆದರೂ ಮನೆಗಳನ್ನು ವಿತರಿಸದೇ ಬಡವರಿಗೆ ಸಂಕಷ್ಟವನ್ನುಂಟು ಮಾಡುತ್ತಿರುವುದು ನೋವಿನ ಸಂಗತಿ ಎಂದರು.
ಮನವಿ ಸ್ವೀಕರಿಸಿದ ಶಾಸಕ ಯಾಸಿರ ಅಹ್ಮದಖಾನ್ ಪಠಾಣ ಮಾತನಾಡಿ, ಈಗಾಗಲೇ ಸುಮಾರು 150 ಅರ್ಹ ಫಲನುಭವಿಗಳ ಪಟ್ಟಿ ಪ್ರಕಟಿಸಲಾಗಿದೆ. ತಕ್ಷಣ ಅಧಿಕಾರಿಗಳ ಸಭೆ ಕರೆದು ಆಯ್ಕೆ ಆಗಿರುವ ಫಲನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.
ತಹಶೀಲ್ದಾರ್ ರವಿ ಕೊರವರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್., ಜಿ ಪ್ಲಸ್ 1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಮುಖಂಡ ವಿಠ್ಠಲ ಮಾಳೋಧೆ, ವೀರಣ್ಣ ಗಡ್ಡಿಯವರ, ಭಾರತಿ ಪೂಜಾರ, ಕಿಶೋರ ದೋತ್ರದ, ಶಾಂತಕ್ಕ ಗಡ್ಡಿಯವರ, ಮಂಜುಳಾ ತಡಸ, ಪಾವನಾ ಮ್ಯಾದರ, ಸಾವಿತ್ರಿ ಚೌಹಾಣ, ಕಸ್ತೂರಿ ಗಣೇಶ ವಡ್ಡರ, ಗಾಯಿತ್ರಿ ಮಾಳೋಧೆ, ಮೌಲಾಲಿ ನವಲಗುಂದ, ಹೊನ್ನವ್ವ
ಹೋತನಳ್ಳಿ, ಹನಮಂತಪ್ಪ ತಡಸಿನಕೊಪ್ಪ ಸೇರಿದಂತೆ ಅನೇಕ ಫಲಾನುಭವಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.