ADVERTISEMENT

ಏಲಕ್ಕಿ ಕಂಪಿನ ನಾಡಿನಲ್ಲಿ ರಾರಾಜಿಸಿದ ತಿರಂಗಾ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:43 IST
Last Updated 23 ಮೇ 2025, 15:43 IST
ಹಾವೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ರಾಷ್ಟ್ರಧ್ವಜ ಹೊತ್ತು ಸಾಗಿದರು
ಹಾವೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ರಾಷ್ಟ್ರಧ್ವಜ ಹೊತ್ತು ಸಾಗಿದರು    

ಹಾವೇರಿ: ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ‘ಆಪರೇಷನ್ ಸಿಂಧೂರ’ ಮೂಲಕ ಧ್ವಂಸ ಮಾಡಿದ ಭಾರತೀಯ ಸೇನೆಯ ಯೋಧರ ಆತ್ಮಸ್ಥೈರ್ಯ ಹೆಚ್ಚಿಸುವುದಕ್ಕಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಅದ್ದೂರಿಯಾಗಿ ನಡೆಯಿತು.

ರಾಷ್ಟ್ರೀಯ ಭದ್ರತೆಗಾಗಿ ನಾಗರಿಕರು ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಸರ್ವಧರ್ಮದ ಜನರು ಉತ್ಸಾಹದಿಂದ ಪಾಲ್ಗೊಂಡರು. ದೇಶದ ಪರ ಘೋಷಣೆ ಕೂಗಿದರು. ಯಾತ್ರೆಯುದ್ದಕ್ಕೂ 200 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹೊತ್ತು ಸಾಗಿದರು.

ನಗರದ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಸೇರಿದ ಜನರು, ಅಲ್ಲಿಂದಲೇ ತಿರಂಗಾ ಯಾತ್ರೆ ಆರಂಭಿಸಿದರು. ಮಾಜಿ ಸೈನಿಕರು, ವಿವಿಧ ಪಕ್ಷಗಳ ಮುಖಂಡರು, ಶಾಲೆ–ಕಾಲೇಜು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಇತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಎಂ.ಜಿ. ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗಿದ ಯಾತ್ರೆಯು ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಮಾಪ್ತಿಗೊಂಡಿತು. ‘ಭಾರತ ಮಾತಾಕಿ ಜೈ, ಜೈ ಜವಾನ್ ಜೈ ಕಿಸಾನ್, ವಂದೇ ಮಾತರಂ’ ಘೋಷಣೆಗಳನ್ನು ಜನರು ಕೂಗಿದರು.

ಮೈಲಾರ ಮಹದೇವಪ್ಪ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರು ಬಣ್ಣದ ಮಠದ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ, ಸಿದ್ದರಾಜ ಕಲಕೋಟಿ, ಮಲ್ಲಿಕಾರ್ಜುನ ಹಾವೇರಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಪ್ರಭು ಹಿಟ್ನಳ್ಳಿ, ಪರಮೇಶ್ವರಪ್ಪ ಮೇಗಳಮನಿ, ಸುರೇಶ ಹೊಸಮನಿ, ಶೋಭಾ ನಿಸ್ಸೀಮಗೌಡ್ರ, ವಿದ್ಯಾ ಶೆಟ್ಟಿ, ಲಲಿತಾ ಗುಂಡೆನಹಳ್ಳಿ ಇದ್ದರು.

ಹಾವೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಗೆ ಸ್ವಾಮೀಜಿಗಳು ಹಾಗೂ ಮಾಜಿ ಸೈನಿಕರು ಚಾಲನೆ ನೀಡಿದರು

‘ಭಾರತೀಯ ಸೇನೆಯ ಗೌರವಿಸಿ’

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಟಿ.ಎಸ್ ಪಾಟೀಲ ‘ರಾಷ್ಟ್ರ ಧ್ವಜ ರಾಷ್ಟ್ರಗೀತೆ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ತಿರಂಗಾ ಯಾತ್ರೆ ಯಶಸ್ವಿಯಾಗಿದೆ. ದೇಶದ ನಾಗರಿಕರು ನಮ್ಮ ಜೊತೆಗಿದ್ದಾರೆಂಬ ಸಂದೇಶ ಸೈನಿಕರನ್ನು ತಲುಪುತ್ತದೆ’ ಎಂದರು. ಕಾರ್ಯಕ್ರಮ ಸಂಯೋಜಕ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ ‘ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಭಾರತದ ಹಲವು ಅಣ್ವಸ್ತ್ರ ಕ್ಷಿಪಣಿಗಳು ದೇಶದ ರಕ್ಷಣೆ ಮಾಡುತ್ತವೆ. ಯುವಜನತೆ ಪರಿಸರ ಜಲ ಸೇರಿದಂತೆ ದೇಶದ ಸಂಪತ್ತನ್ನು ಉಳಿಸಬೇಕು’ ಎಂದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ ‘ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ. ಸೇನೆ ಮತ್ತು ಸೈನಿಕರನ್ನು ಗೌರವಿಸಬೇಕು. ಯೋಧರು ಗಡಿ ಕಾಯುತ್ತಾ ನಮ್ಮನ್ನು ರಕ್ಷಿಸುತ್ತಿದ್ದಾರೆ. ದೇಶ ರಕ್ಷಣೆಗೆ ವಿದ್ಯಾರ್ಥಿ ಸಮುದಾಯ ಸಿದ್ಧವಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.