ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮೂಲಕ ಹಾದು ಹೋಗಿರುವ ಶಿವಮೊಗ್ಗ– ತಡಸ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸುತ್ತಿರುವ ಟೋಲ್ ಗೇಟ್, ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಟೋಲ್ ಗೇಟ್ ಆರಂಭವಾದರೆ, ರಸ್ತೆ ಬಳಕೆ ಮಾಡದಿದ್ದರೂ ಹಲವು ವಾಹನಗಳು ಶುಲ್ಕ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಹಾನಗಲ್ ಪಟ್ಟಣದಿಂದ ಹುಬ್ಬಳ್ಳಿಯತ್ತ ಹೋಗುವ ಮಾರ್ಗದಲ್ಲಿರುವ ಕರಗುದರಿ ಬಳಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ– ತಡಸ ಹೆದ್ದಾರಿ ಬಳಸಿಕೊಂಡು ಹಾನಗಲ್‌ನಿಂದ ತಡಸ ಮೂಲಕ ಹುಬ್ಬಳ್ಳಿಗೆ ಹೋಗುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವುದು ಟೋಲ್‌ಗೇಟ್ ಉದ್ದೇಶವಾಗಿದೆ.
ಆದರೆ, ಹಾನಗಲ್‌ನಿಂದ ಕರಗುದರಿ ವೃತ್ತದಲ್ಲಿ ತಿರುವು ತೆಗೆದುಕೊಂಡು ಬೆಳಗಾಲಪೇಟೆ, ಬಂಕಾಪುರ, ಶಿಗ್ಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುವ ವಾಹನಗಳ ಮಾಲೀಕರು ಸಹ ಶುಲ್ಕ ಪಾವತಿಸಬೇಕಾದ ಸ್ಥಿತಿ ಬರಲಿದೆ. ಈ ಮಾರ್ಗದಲ್ಲಿಯೇ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಉದ್ದೇಶದಿಂದಲೇ, ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಟೋಲ್‌ಗೇಟ್ ಸ್ಥಳ ಬದಲಾವಣೆ ಮಾಡಿರುವ ಆರೋಪ ವ್ಯಕ್ತವಾಗುತ್ತಿದೆ.
ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ವತಿಯಿಂದ ಟೆಂಡರ್ ಪಡೆದಿರುವ ಗುತ್ತಿಗೆದಾರರು, ಟೋಲ್‌ಗೇಟ್ ನಿರ್ವಹಣೆ ಮಾಡಲಿದ್ದಾರೆ. ನಿಗದಿತ ಸ್ಥಳದ ಬದಲು ಬೇರೆಡೆ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವ ಆರೋಪಗಳಿದ್ದರೂ ಕೆಆರ್‌ಡಿಸಿಎಲ್ ಅಧಿಕಾರಿಗಳು ಮೌನವಾಗಿದ್ದಾರೆ.
ಈ ಬಗ್ಗೆ ಹೋರಾಟಗಾರರು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಸರ್ಕಾರದ ನಿರ್ದೇಶನದಂತೆ ಹೆಚ್ಚು ಟೋಲ್ ವಸೂಲಿ ಮಾಡುವುದಷ್ಟೇ ನಮಗೆ ಮುಖ್ಯ. ಟೋಲ್‌ಗೇಟ್ ನಿರ್ಮಾಣ ಮಾಡುವುದು ನಿಶ್ಚಿತ. ಕರಗುದರಿ ಬಳಿ ಟೋಲ್ ಗೇಟ್ ನಿರ್ಮಾಣ ಸಮರ್ಪಕವಾಗಿದೆ’ ಎಂದು ಉತ್ತರಿಸುತ್ತಿದ್ದಾರೆ.
ವಾಹನಗಳನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಚಾಲಕರು, ಹಾನಗಲ್ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಸದ್ಯದ ಮಟ್ಟಿಗೆ ಅವರೆಲ್ಲರೂ ಟೋಲ್‌ಗೇಟ್ ಮುಕ್ತವಾಗಿ ಹುಬ್ಬಳ್ಳಿ ಹಾಗೂ ಇತರೆಡೆ ಸಂಚರಿಸುತ್ತಿದ್ದಾರೆ. ಹಾನಗಲ್ ಸಮೀಪದಲ್ಲಿ ಟೋಲ್‌ಗೇಟ್ ನಿರ್ಮಾಣ ಮಾಡಿದರೆ, ಅವರ ದುಡಿಮೆಯೂ ಇಳಿಕೆಯಾಗಲಿದೆ.
‘ಹಾನಗಲ್ ಪಟ್ಟಣದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇಳಿದಷ್ಟು ಬಾಡಿಗೆ ನೀಡುವುದಿಲ್ಲ. ಬಾಡಿಗೆಯಲ್ಲಿಯೂ ಚೌಕಾಶಿ ಮಾಡುತ್ತಾರೆ. ಟೋಲ್ ಇಲ್ಲದಿದ್ದರಿಂದ, ಜನರು ನೀಡಿದಷ್ಟು ಬಾಡಿಗೆ ಹಣ ಪಡೆಯುತ್ತಿದ್ದೇವೆ. ಈಗ ಟೋಲ್ ಆರಂಭವಾದರೆ, ಜನರು ಹೆಚ್ಚಿನ ಬಾಡಿಗೆ ನೀಡುವುದಿಲ್ಲ. ಟೋಲ್ ಶುಲ್ಕ ಚಾಲಕರಿಗೆ ಹೊರೆಯಾಗಲಿದೆ‘ ಎಂದು ಚಾಲಕ ರಮೇಶ ಅಳಲು ತೋಡಿಕೊಂಡರು.
ಹಾನಗಲ್‌ನಿಂದ ಹುಬ್ಬಳ್ಳಿಗೆ ಹೋಗಲು ಎರಡು ಮಾರ್ಗಗಳಿವೆ. ಕರಗುದರಿ ವೃತ್ತದಿಂದ ಬಂಕಾಪುರ–ಶಿಗ್ಗಾವಿ ಮೂಲಕ ಹುಬ್ಬಳ್ಳಿಗೆ ಹೋಗಬಹುದು. ಮಹಾರಾಜಪೇಟೆ, ಲಕ್ಕಿಕೊಪ್ಪ, ಕೋಣನಕೆರೆ, ದುಂಡಶಿ, ತಡಸ ಮೂಲಕವೂ ಹುಬ್ಬಳ್ಳಿಗೆ ಹೋಗಬಹುದು.
ಬಂಕಾಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಿ ಹುಬ್ಬಳ್ಳಿಗೆ ಹೋಗಲು ಯಾವುದೇ ಟೋಲ್‌ಗೇಟ್‌ಗಳಿಲ್ಲ. ಈ ಮಾರ್ಗದಲ್ಲಿಯೇ ಅತೀ ಹೆಚ್ಚು ವಾಹನಗಳು ಸಂಚರಿಸುತ್ತವೆ. ನವಲಗುಂದ, ಗದಗ, ಸವಣೂರು, ಲಕ್ಷ್ಮೇಶ್ವರಕ್ಕೆ ಹೋಗುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಇದೇ ಮಾರ್ಗವನ್ನೇ ಅವಲಂಬಿಸಿವೆ.
ತಡಸ ಮಾರ್ಗವಾಗಿ ಸಂಚರಿಸುವ ವಾಹನಗಳ ಸಂಖ್ಯೆ ಕಡಿಮೆಯಿದೆ. ಸ್ಥಳೀಯ ಊರುಗಳ ಬಸ್‌ಗಳು ಮಾತ್ರ ತಡಸ ಮಾರ್ಗವನ್ನು ಅವಲಂಬಿಸಿವೆ.
ತಡಸ ಮಾರ್ಗದಲ್ಲಿ ಮಾತ್ರ ರಾಜ್ಯ ಹೆದ್ದಾರಿ (ಶಿವಮೊಗ್ಗ–ತಡಸ) ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಮಾತ್ರ ಟೋಲ್ ಶುಲ್ಕ ವಸೂಲಿ ಮಾಡಬೇಕೆಂಬ ನಿಯಮವಿದೆ. ಆದರೆ, ಬಂಕಾಪುರ–ಶಿಗ್ಗಾವಿ ಮಾರ್ಗವಾಗಿ ಸಂಚರಿಸುವ ವಾಹನಗಳಿಂದಲೂ ಶುಲ್ಕ ವಸೂಲಿ ಮಾಡಲು ತಯಾರಿ ನಡೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
‘ಹಾನಗಲ್‌ನಿಂದ ಹೊರಟ ನಾನು, ಬಂಕಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗಿ ಬರುತ್ತೇನೆ. ಕೇವಲ 5 ಕಿ.ಮೀ. ಮಾತ್ರ ರಾಜ್ಯ ಹೆದ್ದಾರಿ ಬಳಸುತ್ತೇನೆ. ಇದಕ್ಕಾಗಿ ಟೋಲ್ ಪಾವತಿಸಬೇಕು ಎಂಬುದು ಅವೈಜ್ಞಾನಿಕ. ಟೋಲ್‌ಗೇಟ್ ನಿರ್ಮಾಣವೇ ವಿಚಿತ್ರವಾಗಿದೆ. ಸ್ಥಳೀಯರ ಅಭಿಪ್ರಾಯಕ್ಕೆ ಒತ್ತು ನೀಡದೇ, ಏಕಾಏಕಿ ಟೋಲ್‌ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಇದು ಚಾಲಕ ವಿರೋಧಿ ನಡೆ’ ಎಂದು ಹಾನಗಲ್ ಟ್ಯಾಕ್ಸಿ ಚಾಲಕ ಮಾಲತೇಶ ದೂರಿದರು.
‘ಕರಗುದರಿ ನಿರ್ಮಿಸುತ್ತಿರುವ ಟೋಲ್‌ಗೇಟ್ ಅವೈಜ್ಞಾನಿಕವಾಗಿದೆ. ಜನರಿಂದ ಹಗಲು ದರೋಡೆ ಮಾಡಲು ರಾಜಾರೋಷವಾಗಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದ್ದು ಇದರ ವಿರುದ್ಧ ಹೋರಾಟ ಆರಂಭಿಸಲಿದ್ದೇವೆ’ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಹಾನಗಲ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರು ಮಲಗುಂದ ತಿಳಿಸಿದರು. ‘ಹಳದಿ ಬೋರ್ಡ್ ವಾಹನಗಳ ಚಾಲಕರ ಸದ್ಯದ ಸ್ಥಿತಿ ಚಿಂತಾಜನಕವಾಗಿದೆ. ವಿಮೆ ತೆರಿಗೆ ಜಿಪಿಎಸ್ ಪ್ಯಾನಿಕ್ ಬಟನ್ ಸೇರಿದಂತೆ ಹಲವು ರೀತಿಯಲ್ಲಿ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಈಗ ಹಾನಗಲ್ ಚಾಲಕರು ಟೋಲ್‌ಗೇಟ್‌ನಲ್ಲಿಯೂ ಹಣ ಕೊಡುವ ಪರಿಸ್ಥಿತಿ ಬರುತ್ತಿದೆ. ಟೋಲ್‌ಗೇಟ್ ಆರಂಭವಾದರೆ ಚಾಲಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಹೇಳಿದರು. ‘ಟೋಲ್‌ಗೇಟ್ ಆರಂಭಿಸಲು ನಾವು ಬಿಡುವುದಿಲ್ಲ. ಟೋಲ್‌ಗೇಟ್ ಸ್ಥಳದಲ್ಲಿಯೇ ಕುಳಿತು ಹೋರಾಟ ನಡೆಸಲು ಸದಸ್ಯರೆಲ್ಲರೂ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಅಷ್ಟರಲ್ಲಿಯೇ ಟೋಲ್‌ಗೇಟ್ ಬಂದ್ ಮಾಡಿದರೆ ಚಾಲಕರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.