ADVERTISEMENT

ವಿದ್ಯಾರ್ಥಿಗಳು ಬಾರದಿದ್ದರೆ ಹಾವೇರಿ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ಬಂದ್: VC

ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:52 IST
Last Updated 29 ಮೇ 2025, 14:52 IST
ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್.) ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿದರು
ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್.) ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿದರು   

ಹಾವೇರಿ: ‘ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ (ಸ್ನಾತಕೋತ್ತರ) ಮೊದಲ ವರ್ಷಕ್ಕೆ ಒಬ್ಬ ವಿದ್ಯಾರ್ಥಿಯೂ ಪ್ರವೇಶಾತಿ ಪಡೆದಿಲ್ಲ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಬಾರದಿದ್ದರೆ, ವಿಭಾಗವನ್ನೇ ಬಂದ್ ಮಾಡಲು ಚಿಂತನೆ ನಡೆಸಿದ್ದೇವೆ’ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು.

ನಗರದ ಕೆಎಲ್‌ಇ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್.) ಕಾಲೇಜ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವೃತ್ತಿಪರ ಕೋರ್ಸ್‌ನಲ್ಲಿರುವ ವೃತ್ತಿ ಅವಕಾಶಗಳು’ ಕುರಿತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಕ್ಷೇತ್ರಕ್ಕೂ ಮಾಧ್ಯಮ ಬೇಕು. ಆದರೆ, ಮಾಧ್ಯಮದ ಬಗ್ಗೆ ವ್ಯಾಸಂಗ ಮಾಡುವ ಆಸಕ್ತಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ. ಸದ್ಯ ಎರಡನೇ ವರ್ಷದಲ್ಲಿ ಕೇವಲ 6 ವಿದ್ಯಾರ್ಥಿಗಳಿದ್ದಾರೆ. ಮೊದಲ ವರ್ಷಕ್ಕೆ ಪ್ರವೇಶಾತಿಯೇ ಇಲ್ಲ. ಈಗಾಗಲೇ ವಿಭಾಗ ಬಂದ್ ಮಾಡಲು ಯೋಚಿಸಲಾಗಿತ್ತು. ಆದರೆ, 2025-26ನೇ ಸಾಲಿನ ಪ್ರವೇಶಾತಿ ಮುಗಿಯುವವರೆಗೂ ಕಾಯುತ್ತೇವೆ. ಯಾವುದೇ ಪದವಿ (ಕಲಾ, ವಾಣಿಜ್ಯ, ವಿಜ್ಞಾನ) ಮುಗಿಸಿದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದು’ ಎಂದು ಹೇಳಿದರು.

ADVERTISEMENT

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ, ‘ಎಲ್ಲ ಕ್ಷೇತ್ರಗಳಿಗೂ ಮಾಧ್ಯಮ ಬೇಕು. ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ನವ ಮಾಧ್ಯಮಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಕೇವಲ ಪತ್ರಿಕೋದ್ಯಮ ಪದವೀಧರರಿಗೆ ಮಾತ್ರವಲ್ಲದೇ, ಎಲ್ಲ ವಿಭಾಗದ ಪದವೀಧರರಿಗೆ ಮಾಧ್ಯಮಗಳಲ್ಲಿ ಕೆಲಸಗಳಿವೆ. ಆದರೆ, ಭಾಷಾ ಪ್ರೌಢಿಮೆ, ಸಾಮಾನ್ಯ ಜ್ಞಾನ ಹಾಗೂ ಹೊಸದನ್ನು ಕಲಿಯುವ ತುಡಿತವಿರರಬೇಕು’ ಎಂದರು.

‘ಭಾರತದಲ್ಲಿ ಮುದ್ರಣ ಮಾಧ್ಯಮ, ನಂಬಿಕಾರ್ಹ ಮಾಧ್ಯಮ. ಎಷ್ಟೇ ಪೈಪೋಟಿ ಇದ್ದರೂ ಮುಂದಿನ 30 ವರ್ಷಗಳವರೆಗೆ ದೇಶದಲ್ಲಿ ಮುದ್ರಣ ಮಾಧ್ಯಮ ಇರಲಿದೆ. ಇಂಗ್ಲಿಷ್ ಮಾಧ್ಯಮಕ್ಕಿಂತ, ಪ್ರಾದೇಶಿಕ ಭಾಷಾ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಬಿಗಿಗೊಳಿಸಿಕೊಂಡಿವೆ’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಟಿ. ಬಾಗಲಕೋಟಿ, ಪ್ರೊ. ರೇಣುಕಾ ಮೇಟಿ, ವಿಭಾಗದ ಸಂಯೋಜಕ ರವೀಂದ್ರಕುಮಾರ ಬಣಕಾರ, ಜಿ.ಎಚ್. ಕಾಲೇಜ್‌ ಪ್ರಾಂಶುಪಾಲರಾದ ಎಂ.ಎಂ. ಹೊಳ್ಳಿಯವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.