ADVERTISEMENT

ತಿಳವಳ್ಳಿ | ಯುವಕ ಸಾವು ಪ್ರಕರಣ: ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:01 IST
Last Updated 25 ಅಕ್ಟೋಬರ್ 2025, 5:01 IST
ತಿಳವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು 
ತಿಳವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು    

ತಿಳವಳ್ಳಿ: ದೀಪಾವಳಿ ಹಬ್ಬದ ಅಂಗವಾಗಿ ಬುಧವಾರ ನಡೆದ ಹೋರಿ ಹಬ್ಬದಲ್ಲಿ ಹೋರಿ ಗುದ್ದಿ ಗಾಯಗೊಂಡಿದ್ದ  ಭರತ್ ಹಿಂಗಮೇರಿ ಎಂಬ ಯುವಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮದ ಸಾರ್ವಜನಿಕರು ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ದ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕುರುಬರ ಮಾತನಾಡಿ, ಗಾಯಗೊಂಡಿದ್ದ ಭರತ್‌ನನ್ನು ತಕ್ಷಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಹೋಗಲಾಗಿತ್ತು, ಅಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಇರಲಿಲ್ಲ ಹಾಗೂ ಒಂದು ಗಂಟೆ ಕಾದರೂ ಅವರು ಬರದಿದ್ದಾಗ  ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭರತ್‌ ಮೃತಪಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

‘ಈ ಹಿಂದೆಯೇ ವೈದ್ಯರ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದ್ದವು, ಈ ಕುರಿತು ವಿಚಾರಿಸಲು ಅವರಿಗೆ ಕರೆ ಮಾಡಿದಾಗ ಅವಾಚ್ಯವಾಗಿ ಮಾತನಾಡಿದ್ದರು. ಆದ್ದರಿಂದ ನಮ್ಮ ಪಂಚಾಯಿತಿಯಿಂದ ವೈದ್ಯರನ್ನು ಬದಲಾಯಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.

ADVERTISEMENT

ಮುಖಂಡ ರಮೇಶ ಉಪ್ಪಾರ ಮಾತನಾಡಿ, ‘ಈಗ ಇರುವ ವೈದ್ಯರ ಮೇಲೆ ಅನೇಕ ಆರೋಪಗಳಿವೆ.   ಆಸ್ಪತ್ರೆಗೆ ಬಂದ ಅನಕ್ಷರಸ್ಥ ರೋಗಿಗಳಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಹಲವರು ತಿಳಿಸಿದ್ದಾರೆ ಎಂದರು. 

ಪ್ರಭಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ.ಜಯಾನಂದ ಅವರು ಮನವಿ ಸ್ವೀಕರಿಸಿ ಮಾತನಾಡಿ, ಒಪ್ಪಂದದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಹಾಗೂ ಇಬ್ಬರು ನರ್ಸ್‌ಗಳನ್ನು ತಕ್ಷಣವೇ ಅವರನ್ನು ವರ್ಗಾವಣೆ ಮಾಡಲಾಗುತ್ತದೆ ಹಾಗೂ ಸರ್ಕಾರದಿಂದ ನಿಯುಕ್ತಿಗೊಂಡ ನೌಕರರನ್ನು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅವರನ್ನು ವರ್ಗಾವಣೆ ಮಾಡಲಾಗುತ್ತದೆ. ತಿಳವಳ್ಳಿಗೆ ಶೀಘ್ರದಲ್ಲಿ ಆಂಬುಲೆನ್ಸ್‌ ನೀಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಲಿಂಗರಾಜ.ಕೆ.ಜಿ, ಹನುಮಂತಪ್ಪ ಶಿರಾಳಕೊಪ್ಪ, ಕುಮಾರ ಲಕ್ಮೋಜಿ, ಬಸವರಾಜ ಚವ್ಹಾಣ, ರಾಜು ಶೇಷಗಿರಿ, ಸಿದ್ದಲಿಂಗಪ್ಪ ಕಮಡೋಳ್ಳಿ, ದಯಾನಂದ ಹಾವೇರಿ, ಆರೀಪ ಲೋಹಾರ, ವಾಸೀಮ್ ಪಠಾಣ, ಸುನೀಲ್ ಬಾರ್ಕಿ, ಬಸವರಾಜ ನರೇಂದ್ರ, ಹನುಮಂತಪ್ಪ ಕಲ್ಲೇರ, ಹನುಮಂತ ಕೊಂಡೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.