ಹಾವೇರಿ ಜಿಲ್ಲೆಯ ಹಿರೇಮರಳಿಹಳ್ಳಿ ಬಳಿ ಹರಿಯುತ್ತಿರುವ ವರದಾ ನದಿ ನೀರಿನ ದಡದಲ್ಲಿ ಮಹಿಳೆಯರು ಮಂಗಳವಾರ ಪೂಜೆ ಮಾಡಿದರು
ಹಾವೇರಿ: ‘ಅಮ್ಮ ವರದಮ್ಮ. ರೈತರ ಮೇಲೆ ಕರುಣೆ ತೋರಮ್ಮ. ಭೂ ತಾಯಿ ನಂಬಿ ಬೆಳೆ ಬೆಳೆದಿದ್ದು, ಫಸಲು ಕೈಗೆ ಬರುವ ಮುನ್ನವೇ ನಿನ್ನ ಒಡಲು ಚಾಚಿದಿಯಲ್ಲಮ್ಮ. ನಿನ್ನ ಹರಿವಿನ ವೇಗದ ನಾದವ ಕೇಳಿ ಎದೆಯಲ್ಲಿ ಭಯ ಹುಟ್ಟುತ್ತಿದೆ. ಇನ್ನಾದರೂ ನಿಧಾನಿಸಿ ಶಾಂತವಾಗಮ್ಮ’...
ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನಿನ ರೈತರ ಪ್ರಾರ್ಥನೆ ಇದು. ಮುಂಗಾರಿನಲ್ಲಿ ನಾನಾ ಬೆಳೆ ಬೆಳೆದಿದ್ದ ಜಮೀನಿನಲ್ಲಿ, ಇದೀಗ ವರದಾ ನದಿ ನೀರು ನಿಂತುಕೊಂಡಿದೆ. ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ಬೆಳೆದಿದ್ದ ಬೆಳೆ ಈಗಾಗಲೇ ಜಲಾವೃತಗೊಂಡಿದ್ದು, ಬೆಳೆ ನೋಡಿ ರೈತರು ಕಣ್ಣೀರಿಡುತ್ತಿದ್ದಾರೆ. ಜಲಾವೃತಗೊಂಡ ಬೆಳೆ ಬಳಿಯೇ ಕುಳಿತು, ಮುಂದೇನು? ಎಂಬ ಚಿಂತೆಯಲ್ಲಿ ದುಃಖಿತರಾಗುತ್ತಿದ್ದಾರೆ.
ಗೋವಿನ ಜೋಳ, ಸೋಯಾಬಿನ್, ಹೆಸರು, ಶೇಂಗಾ, ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡಿವೆ. ಕೆಲವೆಡೆ ಬೆಳೆಗಳಿಗಿಂತಲೂ ಎತ್ತರಕ್ಕೆ ನೀರು ಹರಿಯುತ್ತಿದ್ದು, ಇಡೀ ಜಮೀನು ನದಿಯಂತೆ ಭಾಸವಾಗುತ್ತಿದೆ.
ನಾಗನೂರು, ಕೂಡಲ, ಕುಣಿಮೆಳ್ಳಿ ಹಳ್ಳಿ, ವರದಹಳ್ಳಿ, ಕಲಕೋಟಿ, ನದಿ ನೀರಲಗಿ, ಹಿರೇಮಗದೂರು, ಚಿಕ್ಕಮಗದೂರು, ಹೊಸರಿತ್ತಿ, ಮೇಲ್ಮುರಿ ಹಾಗೂ ಇತರೆ ಗ್ರಾಮಗಳ ಬಳಿಯೇ ನದಿಯ ನೀರು ಹರಿಯುತ್ತಿದೆ. ಪ್ರತಿ ವರ್ಷವೂ ನೀರು ನೋಡುವ ಇಲ್ಲಿಯ ಜನರು, ‘ಮನೆ ಬಾಗಿಲಿಗೆ ನೀರು ಬಂದರೂ ಪರವಾಗಿಲ್ಲ. ಮನೆಯೊಳಗೆ ಬಂದ ಮೇಲೆ ನೋಡೋಣ’ ಎಂದೇ ಹೇಳುತ್ತಿದ್ದಾರೆ.
ತರಕಾರಿ ಬೆಳೆ ಹಾನಿ
‘ವರದಾ ನದಿಯಿಂದ 1 ಕಿ.ಮೀ ದೂರದಲ್ಲಿ ನನ್ನ ಜಮೀನು ಇದೆ. ಸೌತೆಕಾಯಿ, ಬದನೆಕಾಯಿ ಹಾಗೂ ಇತರೆ ತರಕಾರಿ ಬೆಳೆದಿದ್ದೆ. ಈಗ, ನದಿಯ ನೀರು ಒಡಲು ಬಿಟ್ಟು ಅಕ್ಕ–ಪಕ್ಕಕ್ಕೆ 1 ಕಿ.ಮೀ.ವರೆಗೂ ನೀರು ವ್ಯಾಪಿಸಿದೆ. ನನ್ನ ಜಮೀನು ಜಲಾವೃತಗೊಂಡಿದೆ. ನೀರು ಸತತವಾಗಿ ನಿಂತರೆ, ಬೆಳೆ ಹಾನಿಯಾಗಲಿದೆ. ವರದಾ ತಾಯಿ ನಮ್ಮ ಮೇಲೆ ಕೃಪೆ ತೋರಿ ನೀರು ಇಳಿಸಿದರೆ ಬೆಳೆ ಹಾನಿಯಾಗುವುದಿಲ್ಲ’ ಎಂದು ಹಿರೇಮರಳಿಹಳ್ಳಿ ರೈತ ರಾಚಣ್ಣ ಹೇಳಿದರು.
‘ನಮ್ಮೂರಿನಲ್ಲಿ ಹೊಳೆ ತುಂಬಿ ಹರಿ ಯುತ್ತಿದೆ. ಗ್ರಾಮಕ್ಕೂ ನೀರು ನುಗ್ಗುವ ಸ್ಥಿತಿ ಬಂದರೂ ಬರಬಹುದು. ಜಿಲ್ಲಾ ಡಳಿತದ ಅಧಿಕಾರಿಗಳು, ವರದಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಹಾನಿ ಯಾಗಿರುವ ಬೆಳೆಗಳ ಬಗ್ಗೆ ನಿಖರ ಸಮೀಕ್ಷೆ ಮಾಡಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದರು.
ಗ್ರಾಮ ಹಾಗೂ ಜಮೀನಿಗೆ ಹೋಗುವ ರಸ್ತೆಗಳು ಬಂದ್: ಹಿರೇಮಗದೂರು, ನಂದಿ ನೀರಲಗಿ, ಡಂಬರಮತ್ತೂರು, ಹಿರೇಮರಳಿಹಳ್ಳಿ ಮಾರ್ಗದ ರಸ್ತೆಯಲ್ಲಿ ಅಲ್ಲಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಇಲ್ಲಿಯ ಜನರ ಓಡಾಟ ತಾತ್ಕಾಲಿಕವಾಗಿ ಬಂದ್ ಆಗಿದೆ.
ಹಿರೇಮಗದೂರು, ನದಿ ನೀರಲಗಿ, ಡಂಬರಮತ್ತೂರು, ಮೇಲ್ಮುರಿ ಹಾಗೂ ಸುತ್ತಮುತ್ತ ಜಮೀನುಗಳಿಗೆ ಹೋಗುವ ದಾರಿಯಲ್ಲೂ ವರದಾ ನದಿ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.
ದಡದಲ್ಲಿ ಪೂಜೆ
ವರದಾ ನದಿಯಲ್ಲಿ ನೀರು ಕ್ರಮೇಣ ಹೆಚ್ಚಳವಾಗುತ್ತಿರುವು ದರಿಂದ, ಜನರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಮಟ್ಟ ಕಡಿಮೆಯಾಗಲಿ, ತಮ್ಮ ಜಮೀನು ಹಾಗೂ ಊರು ಉಳಿಯಲಿ ಎಂಬುದಾಗಿ ಪ್ರಾರ್ಥಿಸುತ್ತಿರುವ ಜನರು, ದಡದಲ್ಲಿ ಪೂಜೆ ಮಾಡುತ್ತಿದ್ದಾರೆ.
‘ನಮ್ಮ ಬದುಕಿಗೆ ವರದಾ ನೀರೇ ಆಸರೆ. ಆದರೆ, ಈಗ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಮುಂಬರುವ ದಿನ ಗಳಲ್ಲಿ ವರದಮ್ಮ ನನ್ನ ಮೇಲೆ ಕರುಣೆ ತೋರಿ ಕಡಿಮೆಯಾಗುತ್ತಾಳೆ. ಈಗ ನೀರು ಗ್ರಾಮದತ್ತ ಕ್ರಮೇಣ ನುಗ್ಗುತ್ತಿದೆ. ಮಾರ್ಗದಲ್ಲಿಯೇ ನೀರು ನಿಂತರೆ ಊರು ಉಳಿಯಲಿದೆ. ದಡದಲ್ಲಿ ಪೂಜೆ ಮಾಡಿ, ವರದಮ್ಮಳಿಗೆ ಆರತಿ ಮಾಡುತ್ತಿದ್ದೇವೆ. ನೈವೈದ್ಯೆ ಹಿಡಿದು ಬೇಡಿಕೊಳ್ಳುತ್ತಿದ್ದೇವೆ’ ಎಂದು ಹಿರೇಮರಳಿಹಳ್ಳಿಯ ರೈತ ಮಹಿಳೆ ನೀಲಮ್ಮ ಹೇಳಿದರು.
ಗುಡ್ಡ ಕುಸಿತದ ಭೀತಿ
ಹಾನಗಲ್:ತಾಲ್ಲೂಕಿನ ಸಮ್ಮಸಗಿ ಗ್ರಾಮ ಸಮೀಪ ಗುಡ್ಡ ಕುಸಿತದ ಭೀತಿ ಸೃಷ್ಠಿಯಾಗಿದೆ. ಹಾವೇರಿ–ಶಿರಶಿ ರಸ್ತೆಯ ಎರಡೂ ಬದಿಯ ಗುಡ್ಡದ ಮಣ್ಣು ರಸ್ತೆಯ ಮೇಲೆ ಸಂಗ್ರಹಗೊಂಡು ಮಂಗಳ ವಾರ ಬೆಳಿಗ್ಗೆ ಸಂಚಾರ ಸ್ಥಗಿತಗೊಂಡಿತ್ತು.
ಸಾಗರಮಾಲಾ ಯೋಜನೆ ಅಡಿ ಯಲ್ಲಿ ಈ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ. ಅಗಲೀಕರಣದ ಉದ್ದೇಶಕ್ಕಾಗಿ ರಸ್ತೆಯ ಇಕ್ಕೆಲಿನ ಮಣ್ಣಿನ ಗುಡ್ಡದ ಕೆಲವಷ್ಟು ಭಾಗ ತೆರವು ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತದ ಭೀತಿಯಲ್ಲಿರುವ ಜನರು ಸಮ್ಮಸಗಿ ರಸ್ತೆಯಲ್ಲಿ ಗುಡ್ಡ ಸಡಿಲಗೊಂಡು ಕುಸಿಯುತ್ತಿದೆ ಎಂಬ ಶಂಖೆಯಲ್ಲಿದ್ದಾರೆ.
ಸ್ಥಳಿಯ ಆಡಳಿತದ ಸೂಚನೆ ಮೇರೆಗೆ ರಸ್ತೆ ನಿರ್ಮಾಣ ಸಂಸ್ಥೆಯವರು ಜೆಸಿಬಿ ಬಳಸಿ ರಸ್ತೆ ಮೇಲಿನ ಮಣ್ಣು ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಬಳಿಕ ರಸ್ತೆ ಸಂಚಾರ ಸುಗಮವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ರೇಣುಕಾ ಎಸ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಾಗರಮಾಲಾ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಹಾನಗಲ್‌ನ ನಾಲ್ಕರ್‌ಕ್ರಾಸ್‌ನಿಂದ ಶಿರಸಿವರೆಗೆ ರಸ್ತೆ ನಿರ್ಮಾಣ ವೇಗ ಪಡೆದುಕೊಂಡಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.
ನಿರಂತರ ಮಳೆಗೆ ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಮರ ಉರುಳಿ ಬಿದ್ದು ಆಕಳು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ನಾಗಪ್ಪ ಗಿರಿಯಣ್ಣನವರ ಎಂಬ ರೈತರಿಗೆ ಈ ಆಕಳು ಸೇರಿದೆ.
ನದಿ ಪಾತ್ರಕ್ಕೆ ಡಿಸಿ, ಸಿಇಒ ಭೇಟಿ
ವರದಾ ನದಿ ನೀರು ಹರಿಯುತ್ತಿರುವ ಹಾವೇರಿ, ಸವಣೂರು ತಾಲ್ಲೂಕಿನಲ್ಲಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಅವರು ಮಂಗಳವಾರ ಭೇಟಿ ನೀಡಿದರು.
ಹೊಸರಿತ್ತಿಯಲ್ಲಿರುವ ರಾಘವೇಂದ್ರ ಸ್ವಾಮೀಜಿ ಮಠ ಜಲಾವೃತಗೊಂಡಿದ್ದು, ಈ ಸ್ಥಳವನ್ನು ಅಧಿಕಾರಿಗಳು ವೀಕ್ಷಿಸಿದರು. ಬೆಳವಿಗಿ ಹಾಗೂ ಹಾಲಗಿ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದರು. ಪ್ರವಾಹ ಭೀತಿ ಇರುವುದರಿಂದ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂರು ಸಾವಿರ ಎಕರೆ ಜಲಾವೃತ
ಗುತ್ತಲ: ಉತ್ತರ ಕನ್ನಡ ಜಿಲ್ಲೆಯಲ್ಲಿ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವರದಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಕರ್ಜಿಗಿ, ಕೊಣನತಂಬಿಗಿ, ಮಣ್ಣೂರ, ಕೆಸರಳ್ಳಿ, ಕಿತ್ತೂರ, ಕೊರಡೂರ, ಹೊಸರಿತ್ತಿ, ಹಾಲಗಿ, ಮರೋಳ, ಗೂಡೂರು, ಗುಡಿಸಲಕೊಪ್ಪ, ಕೊಡಬಾಳ ಮತ್ತು ಬೆಳವಗಿ ಗ್ರಾಮಗಳ 3 ಸಾವಿರ ಎಕರೆ ಪ್ರದೇಶದಲ್ಲಿರುವ ಬೆಳೆ ವರದಾ ನದಿಯ ಪ್ರವಾಹಕ್ಕೆ ಸಂಪೂರ್ಣ ನಾಶವಾಗಿವೆ ಎಂದು ಮರೋಳ ಗ್ರಾಮದ ರೈತ ಮಂಜುನಾಥ ಮಾಗಡಿ ಪ್ರಜಾವಾಣಿಗೆ ತಿಳಿಸಿದ್ದಾರೆ.
ಹೊಸರಿತ್ತಿ ಗ್ರಾಮದ ಕೆ.ಸಿ.ಕೋರಿ ಅವರ ಮನೆ ನೀರಿನಲ್ಲಿ ಜಲಾವೃತಗೊಂಡಿದೆ. ನೀರಿನಲ್ಲಿ ಬರುವ ಹಾವು ಮತ್ತು ಚೇಳುಗಳ ಕಾಟಕ್ಕೆ ಮನೆ ಬಿಟ್ಟು ಸುರಕ್ಷಿತ ಸ್ಥಳದಲ್ಲಿ ಅವರು ವಾಸಮಾಡುತ್ತಿದ್ದೇವೆ ಎಂದು ತಿಳಿಸಿದರು. ವರದಾ ನದಿಯ ನೀರು ಭಾರಿ ಪ್ರಮಾಣದಲ್ಲಿ ಏರುತ್ತಿರುವುದರಿಂದ ಹಾಲಗಿ ಮತ್ತು ಮರೋಳ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ನೀರು ಬಂದಿದ್ದು, ಹಾವೇರಿ–ಗದಗ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ಹಲವಾರು ಗ್ರಾಮಗಳಲ್ಲಿ ನೀರು ನುಗ್ಗಿದ್ದು, ನದಿಯ ದಡದಲ್ಲಿರುವ ಮನೆಗಳಿಗೆ ಹಾನಿಯಾಗಿದ್ದು, ಸುರಕ್ಷಿತ ಸ್ಥಳ ಅರಸಿ ಜನತೆ ಹೋಗುತ್ತಿದ್ದಾರೆ.
ಗೋವಿನಜೋಳ, ಹತ್ತಿ, ಶೇಂಗಾ, ಕಬ್ಬು, ಭತ್ತ, ತರಕಾರಿ ಬೆಳೆಗಳು ಈ ಭಾಗದಲ್ಲಿ ಹೆಚ್ಚು ಬೆಳೆದಿದ್ದಾರೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಗೊಬ್ಬರ ಬೀಜ ಹಾಕಿದ್ದೇವೆ. ಎಲ್ಲ ಬೆಳೆ ನೀರು ಪಾಲಾಗಿದೆ ಎಂದು ಕೊಡಬಾಳ ರೈತ ಲೋಕೇಶ ತಿಳಿಸಿದರು.
ಸತತ ಮಳೆಯಿಂದ 526 ಮನೆಗೆ ಹಾನಿ
‘ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ 526 ಮನೆಗಳಿಗೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹೇಳಿದರು. ಮಳೆ ಹಾನಿ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ಅವರು, ‘3 ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. 7 ಮನೆಗಳಿಗೆ ತೀವ್ರ ಹಾನಿ ಆಗಿದ್ದು, 516 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1 ದನದ ಕೊಟ್ಟಿಗೆ ಕುಸಿದು ಬಿದ್ದಿದೆ’ ಎಂದರು.
‘ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಮನೆ ಗೋಡೆ ಕುಸಿದು ಅವಳಿ ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ಇದನ್ನು ಹೊರತುಪಡಿಸಿ, ಜಿಲ್ಲೆಯಲ್ಲಿ ಯಾವುದೇ ಮನುಷ್ಯರ ಜೀವ ಹಾನಿ ಸಂಭವಿಸಿಲ್ಲ. ಹಾನಗಲ್ ತಾಲ್ಲೂಕಿನ ಬೆಳವತ್ತಿ ಗ್ರಾಮದಲ್ಲಿ ಮರ ಬಿದ್ದು ಆಕಳು ಮೃತಪಟ್ಟಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.