ADVERTISEMENT

ಮನೆ–ಮನೆಗೆ ಮಾತ್ರೆ ವಿತರಿಸಿ

ಇಂದಿನಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 14:24 IST
Last Updated 15 ಏಪ್ರಿಲ್ 2021, 14:24 IST
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌ ಇದ್ದಾರೆ 
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌ ಇದ್ದಾರೆ    

ಹಾವೇರಿ: ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಇಂದಿನಿಂದ (ಏಪ್ರಿಲ್ 16) ಏ.30ರವರೆಗೆ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮನೆ- ಮನೆಗೆ ತೆರಳಿ ಒಂದರಿಂದ 19 ವರ್ಷದೊಳಗಿನ ವಯೋಮಾನದವರಿಗೆ ಜಂತು ಹುಳು ನಿವಾರಣಾ (ಅಲ್ಬೆಂಡಝೋಲ್) ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಿಗದಿತ ಕಾಲಾವಧಿಯೊಳಗೆ ನೂರಕ್ಕೆ ನೂರರಷ್ಟು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತಂತೆ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವರ್ಷ ಶಾಲಾ-ಕಾಲೇಜುಗಳಲ್ಲಿ ಮಾತ್ರೆಗಳನ್ನು ವಿತರಿಸುವ ಬದಲು ಮಕ್ಕಳ ಮನೆ– ಮನೆಗೆ ತೆರಳಿ ಜಂತು ಹುಳು ನಿವಾರಕ ಮಾತ್ರೆಯನ್ನು ಅರ್ಹರಿಗೆ ವಿತರಿಸಬೇಕು. ಮಾತ್ರೆ ವಿತರಣೆಗೆ ಮನೆಗೆ ಭೇಟಿ ನೀಡಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರೊಂದಿಗೆ ಎಲ್ಲ ಪಾಲಕರು ಸಹಕರಿಸುವ ಮೂಲಕ ಜಿಲ್ಲೆಯನ್ನು ಜಂತುಹುಳು ಮುಕ್ತ ಜಿಲ್ಲೆಯನ್ನಾಗಿಸಲು ಮನವಿ ಮಾಡಿದರು.

ADVERTISEMENT

ನಿಗದಿತ 15 ದಿನದೊಳಗಾಗಿ ಈಗಾಗಲೇ ಗುರುತಿಸಲ್ಪಟ್ಟ ಜಿಲ್ಲೆಯ ಒಂದರಿಂದ ಹತ್ತೊಂಬತ್ತು ವರ್ಷದ 5.59 ಲಕ್ಷ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸಬೇಕು. ಯಾವುದೇ ದೂರುಗಳು ಬಂದರೆ ತಕ್ಷಣ ಸ್ಪಂದಿಸಬೇಕು. ಮಾತ್ರೆಯ ಸರಬರಾಜು, ದಾಸ್ತಾನು ಕುರಿತಂತೆ ಯಾವುದೇ ವ್ಯತ್ಯಯ ವಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಮಣ್ಣಿನ ಮುಖಾಂತರ ಹರಡಲ್ಪಡುವ ಜಂತುಹುಳುಗಳು ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಜಂತು ಹುಳು ಸೋಂಕಿನಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಜಂತು ಹುಳುಗಳಿಂದ ಮಕ್ಕಳ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗುಡ್ಡಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಡಾ.ದೇವರಾಜ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.