ಹಾವೇರಿ: ‘ರಾಜ್ಯದಲ್ಲಿ ದೇಶದ್ರೋಹಿ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ತೀರ್ಮಾನಿಸಿದ್ದೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸಿಎಎ ವಿರುದ್ಧ ಸುಳ್ಳು ಪ್ರಚಾರ ಮಾಡಿ, ಸಮಾಜದಲ್ಲಿ ಕ್ಷೋಭೆಯನ್ನುಂಟು ಮಾಡುತ್ತಿರುವ ವಿರೋಧ ಪಕ್ಷಗಳ ಜತೆಯಲ್ಲಿ ದೇಶದ್ರೋಹಿ ಶಕ್ತಿಗಳು ಸೇರಿಕೊಂಡಿವೆ. ಎಲ್ಲೆಲ್ಲಿ ಸಿಎಎ ಪ್ರತಿಭಟನೆಗಳು ನಡೆಯುತ್ತವೆಯೋ, ಅಲ್ಲಿ ಇಂಥ ಹೇಳಿಕೆಗಳಿಗೆ ಕುಮ್ಮಕ್ಕು ಸಿಗುತ್ತಿದೆ’ ಎಂದು ಹೇಳಿದರು.
ಅಫ್ಜಲ್ ಗುರು ವಿರುದ್ಧ ಕ್ರಮ ತೆಗೆದುಕೊಳ್ಳುವ ಸಂದರ್ಭದಲ್ಲಿ ಕನ್ಹಯ್ಯಕುಮಾರ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರು. ಆಗ ಕೆಲವು ಸಂಘಟನೆಗಳು ಮತ್ತು ದೇಶದ್ರೋಹಿ ಶಕ್ತಿಗಳು ಆತನಿಗೆ ಬೆಂಬಲ ಸೂಚಿಸಿದ್ದವು. ಹೀಗಾಗಿ ಇಂಥ ಕೃತ್ಯಗಳಿಗೆ ಕುಮ್ಮಕ್ಕು ಸಿಕ್ಕಿದೆ. ನಂತರ ಜೆಎನ್‌ಯು ಗಲಭೆ, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದಂತೆ ಕರ್ನಾಟಕದಲ್ಲೂ ಇಂಥ ಕೃತ್ಯಗಳು ನಡೆಯುತ್ತಿವೆ ಎಂದರು.
ಉನ್ನತ ಮಟ್ಟದ ಸಭೆ:
ಸಿಎಎ ಪ್ರತಿಭಟನೆ ವೇಳೆ ನಡೆದ ಎಲ್ಲ ಘಟನೆಗಳನ್ನು ಅವಲೋಕನ ಮಾಡುತ್ತಿದ್ದೇವೆ. ಫೇಸ್‌ಬುಕ್ ಪೋಸ್ಟ್‌ಗಳು, ಕಾರ್ಯಕ್ರಮದ ಆಯೋಜಕರು, ಹಿಂದಿನ ಸಂಘಟಕ ಶಕ್ತಿಗಳು ಹೀಗೆ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ. ದೇಶದ್ರೋಹಿ ಶಕ್ತಿಗಳನ್ನು ಯಾವ ರೀತಿ ನಿಯಂತ್ರಿಸಬೇಕು ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ನಾಳೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದರು.
ವಿದ್ಯಾಸಂಸ್ಥೆಗಳಿಗೆ ಸೂಚನೆ:
ವಿದ್ಯಾಸಂಸ್ಥೆ, ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಬೇಕು. ದೇಶದ್ರೋಹಿ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಕಸ್ಮಾತ್ ನಡೆದರೆ, ತಕ್ಷಣ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಗೊತ್ತಿದ್ದೂ ಸುಮ್ಮನಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೋಸ್ಟ್ ವಿರುದ್ಧ ನಿರ್ಬಂಧ
ಅಮೆರಿಕ ಮೂಲದ ಅಂತರ್ಜಾಲ ಕಂಪನಿಗಳು ಭಾರತದ ವಿರುದ್ಧ ನಿರಂತರವಾಗಿ ಪೋಸ್ಟಿಂಗ್ ಮಾಡುತ್ತಿವೆ. ಇವುಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ಜತೆ ಮಾತನಾಡಿದ್ದೇವೆ. ಪೋಸ್ಟಿಂಗ್ ಮಾಡದಂತೆ ನಿರ್ಬಂಧ ಹೇರಲು ಕೋರಿದ್ದೇವೆ ಎಂದು ತಿಳಿಸಿದರು.
ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳಿಗೆ ವಿದೇಶದಿಂದ ಹಣಕಾಸಿನ ನೆರವು ಬಗ್ಗೆ ಇಡಿ ತನಿಖೆ ಮಾಡುತ್ತಿದೆ. ಸುಮಾರು ₹700 ಕೋಟಿಗೂ ಹೆಚ್ಚು ಹಣ ಸಂದಾಯವಾದ ಮಾಹಿತಿ ಇದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.