
ತಿಳವಳ್ಳಿ: ಸಾವಿರಾರು ಪ್ರೇಕ್ಷಕರ ಹರ್ಷೋದ್ಗಾರದ ಮಧ್ಯೆ ಜಾನಪದ ಸಂಸ್ಕೃತಿ ಪ್ರತೀಕವಾದ ಹೋರಿ ಬೆದರಿಸುವ ಸ್ಪರ್ಧೆಯು ಸಮೀಪದ ಕೂಸನೂರ ಗ್ರಾಮದಲ್ಲಿ ಗುರುವಾರ ಅದ್ದೂರಿಯಾಗಿ ನಡೆಯಿತು.
ವರ್ಷಪೂರ್ತಿ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರು ದೀಪಾವಳಿ ಹಬ್ಬದಲ್ಲಿ ಮನರಂಜನೆ ಹಾಗೂ ಸಂಪ್ರದಾಯದಂತೆ ತಮ್ಮ ಹೋರಿಗಳೊಂದಿಗೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.
ಮಾಲೀಕರು ತಮ್ಮ ಹೋರಿಗಳನ್ನು ಜೂಲಾ, ಬಲೂನ್, ಕಾಲ್ಗೆಜ್ಜೆ, ಬಣ್ಣದ ರಿಬ್ಬನ್, ಕೊಬ್ಬರಿ ಮಾಲೆ ಸೇರಿದಂತೆ ವಿವಿಧ ಆಲಂಕಾರಿಕ ವಸ್ತುಗಳಿಂದ ಸಿಂಗರಿಸಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವಕರು ತಮ್ಮ ನೆಚ್ಚಿನ ಹೋರಿ ಹೆಸರನ್ನು ಮುದ್ರಿಸಿದ ಟೀಶರ್ಟ್‌ಗಳನ್ನು ಧರಿಸಿದ್ದರು. ತಮ್ಮ ಹೋರಿ ಬರುವ ಮುನ್ನ ಹೋರಿ ಹೆಸರನ್ನು ಹೊಂದಿದ ಧ್ವಜವನ್ನು ಹಾರಿಸುತ್ತ ಸಂಭ್ರಮದಿಂದ ಮುಂದೆ ಸಾಗುತ್ತಿದ್ದರು.
ಹೋರಿ ಮಾಲೀಕರು ಹೋರಿಗಳಿಗೆ ಸಿನಿಮಾ ಹಾಗೂ ದೇವರ ಹೆಸರುಗಳಾದ ಯಜಮಾನ, ಪ್ರಳಯಾ, ಅಂಬೇಡ್ಕರ್ ಹುಲಿ, ಕೂಸನೂರ ಡಾನ್, ಜಮೀನ್ದಾರ್, ರಾವಣ, ಇಂಡಿಯನ್ ಎಕ್ಸ್‌ಪ್ರೆಸ್, ಭಗವಾನ್, ಗುಡ್ಡದ ವಡೆಯಾ, ಜೈ ಹನುಮಾನ್, ಚಿನ್ನ, ಕರ್ನಾಟಕದ ಕೇಸರಿ, ತಿಳವಳ್ಳಿ ಹುಲಿ, ಕಾಡಿನ ರಾಜ, ವಾಲ್ಮೀಕಿ ಹುಲಿ, ಬೆಟ್ಟ, ಸಾಮ್ರಾಟ್, ಗೌಡ್ರ ಹುಲಿ, ಕಿಂಗ್ ಎಂಬ ಹೆಸರುಗಳನ್ನು ಇಟ್ಟಿದ್ದರು.
ಪ್ರೇಕ್ಷಕರತ್ತ ಹೋರಿ ನುಗ್ಗುವ ಸೂಕ್ಷ್ಮ ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ, ಹಾಗೂ ಬಿದಿರಿನ ಬೇಲಿಯನ್ನು ನಿರ್ಮಿಸಿ ರಕ್ಷಣೆ ನೀಡಿದ್ದರು. ಒಂದು ಹೋರಿ ಸ್ಪರ್ಧೆ ಮುಗಿಸುವವರೆಗೂ ಇನ್ನೊಂದು ಹೋರಿ ಪ್ರವೇಶಿಸದಂತೆ ಮುಖ್ಯದ್ವಾರದಲ್ಲಿ ಗೇಟ್ ಅಳವಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.