ADVERTISEMENT

ಆಸ್ಪತ್ರೆಯಿಂದ ಕಾನ್‌ಸ್ಟೆಬಲ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 14:55 IST
Last Updated 23 ಜೂನ್ 2020, 14:55 IST

ಹಾವೇರಿ: ಕೋವಿಡ್‍ನಿಂದ ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾದಬ್ಯಾಡಗಿ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಉನ್ನತ ಅಧಿಕಾರಿಗಳು ಹೂಗುಚ್ಛ ನೀಡಿ ಸಂಭ್ರಮದಿಂದ ಬೀಳ್ಕೊಟ್ಟರು.

ಜೂನ್ 15ರಂದು ಕದರಮಂಡಲಗಿಯ ನಿವಾಸಿಯಾದ 41 ವರ್ಷದ ಎಸ್.ಬಿ. ಕಾನ್‍ಸ್ಟೆಬಲ್‌ಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಾನ್‍ಸ್ಟೆಬಲ್‌ ಕಾರ್ಯನಿರ್ವಹಿಸುತ್ತಿದ್ದ ಬ್ಯಾಡಗಿ ಪೊಲೀಸ್ ಠಾಣೆ ಹಾಗೂ ಬ್ಯಾಡಗಿ ತಹಶೀಲ್ದಾರ್‌ ಕಚೇರಿಯನ್ನು ಸೀಲ್‍ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿತ್ತು.

ಎಸ್ಪಿ ಕೆ.ಜಿ.ದೇವರಾಜ ಮಾತನಾಡಿ, ಕಾನ್‍ಸ್ಟೇಬಲ್‍ಗೆ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಾಗಿತ್ತು. ಕೋವಿಡ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿಶೇಷ ಶ್ರಮದಿಂದ ತ್ವರಿತವಾಗಿ ಗುಣಮುಖರಾಗಿ ಹೊರಬಂದಿರುವುದು ಸಂತಸ ತಂದಿದೆ. ಇವರ ಪ್ರಾಥಮಿಕ ಸಂಪರ್ಕದ ಎಲ್ಲರ ಲ್ಯಾಬ್ ವರದಿಯೂ ಸಹ ನೆಗಟಿವ್ ಬಂದಿದೆ. ಇಂದಿನಿಂದ ಬ್ಯಾಡಗಿ ಪೊಲೀಸ್ ಠಾಣೆ ಸೀಲ್‍ಡೌನ್ ತೆರವುಗೊಳಿಸಿ ಎಂದಿನಂತೆ ಕಚೇರಿ ಕೆಲಸವನ್ನು ಪುನರ್ ಆರಂಭಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಡಿವೈಎಸ್.ಪಿ. ವಿಜಯಕುಮಾರ್ ಸಂತೋಷ್, ಸಿ.ಪಿ.ಐ.ಸಂತೋಷ್ ಪವಾರ, ಇನ್ಸಪೆಕ್ಟರ್ ಮಂಜಣ್ಣ ಟಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.