ADVERTISEMENT

ಹುಕ್ಕೇರಿಮಠದ ಉಭಯಶ್ರೀಗಳ ಭಾವಚಿತ್ರದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 13:45 IST
Last Updated 2 ಜನವರಿ 2023, 13:45 IST
   

ಹಾವೇರಿ: ನಗರದ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 77ನೇ ಮತ್ತು ಲಿಂ.ಶಿವಲಿಂಗ ಸ್ವಾಮಿಗಳ 14ನೇ ಪುಣ್ಯ ಸ್ಮರಣೊತ್ಸವದ ಅಂಗವಾಗಿ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಸೋಮವಾರ ಸಂಜೆ 4 ಗಂಟೆಗೆ ಶ್ರೀಮಠದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಎಂ.ಜಿ.ರಸ್ತೆ, ಸುಭಾಷ್‌ ಸರ್ಕಲ್‌, ದೇಸಾಯಿ ಗಲ್ಲಿ, ಮೈಲಾರ ಮಹದೇವಪ್ಪ ಸರ್ಕಲ್‌, ಕಲ್ಲುಮಂಟಪ ರಸ್ತೆ, ಏಲಕ್ಕಿ ಓಣಿ, ಪುರಸಿದ್ಧೇಶ್ವರ ದೇವಸ್ಥಾನದ ರಸ್ತೆಗೆ ಹೋಗಿ, ಅಲ್ಲಿಂದ ಶ್ರೀಮಠವನ್ನು ತಲುಪಿತು.

ಮೆರವಣಿಗೆಯಲ್ಲಿ ಕುಪ್ಪೇಲೂರಿನ ಸಮ್ಮಾಳ ತಂಡ, ರಾಣೆಬೆನ್ನೂರಿನ ಬ್ಯಾಂಡ್, ಇಜಾರಿಲಕ್ಮಾಪುರದ ಜಾಂಜ್ ಮೇಳ, ದಾವಣಗೇರಿಯ ನಂದಿಕೋಲು ಕುಣಿತ, ಚಂಡೆ ಕುಣಿತ, ಬೇಡರ ವೇಷ, ಅರಳೇಶ್ವರ ಡೊಳ್ಳು ಕುಣಿತ, ಹುಬ್ಬಳ್ಳಿಯ ಜಗ್ಗಲಗಿ ತಂಡ, ಗೊಂಬೆ ಆಟ, ಆನೆ ಸೇರಿದಂತೆ ಹಲವಾರು ಕಲಾ ತಂಡಗಳು ಮೆರವಣಿಗೆಗೆ ರಂಗು ತಂದವು.

ADVERTISEMENT

ಮುಂಜಾನೆ ಉಭಯ ಶ್ರೀಗಳ ಗದ್ದುಗೆಗೆ ಮಹಾಭಿಷೇಕ ನಡೆಯಿತು. ಶ್ರೀಮಠದಲ್ಲಿ ಉಭಯ ಶ್ರೀಗಳ ಗದ್ದುಗೆಯನ್ನು ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 11 ಗಂಟೆಯಿಂದಲೇ ಮಹಾದಾಸೋಹ ಪ್ರಾರಂಭಿಸಲಾಯಿತು. ಸಾವಿರಾರು ಭಕ್ತರು ಶ್ರೀಗಳ ಗದ್ದುಗೆ ದರ್ಶನ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.