ADVERTISEMENT

ಸಾಹಿತ್ಯ ಸಮ್ಮೇಳನದ ಸಂದರ್ಭ ಸ್ಥಳೀಯರ ಮನೆಯಲ್ಲೇ ವಾಸ್ತವ್ಯ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 15:42 IST
Last Updated 21 ಡಿಸೆಂಬರ್ 2022, 15:42 IST
   

ಹಾವೇರಿ: ‘ನಗರದಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ನಾನು ಸಾಮಾನ್ಯರಂತೆ ಹಾವೇರಿಯ ಜನಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಮಾಡುವ ತೀರ್ಮಾನ ಮಾಡಿದ್ದೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತುʼ ಎನ್ನುವ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿರುವಾಗ ʻಮನೆ-ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುʼ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ನೂರಾರು ಜನರ ಮನೆಗೆ ನಾನು ಭೇಟಿ ಕೊಟ್ಟಿದ್ದೇನೆ. ಈ ಮೂಲಕ ಪರಿಷತ್ತಿನ ಧ್ಯೇಯೋದ್ದೇಶವನ್ನು ಜನರ ಮನೆಯಂಗಳಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ.

ಹಾವೇರಿಯ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜನವರಿ 4ರಿಂದ 8ರವರೆಗೆ ಹಾವೇರಿಯಲ್ಲಿ ವಾಸ್ತವ್ಯ ಮಾಡಲಿದ್ದು, ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಇರುವ ಅಜ್ಜಯ್ಯನ ಗುಡಿಯ ಸುತ್ತಮುತ್ತಲಿನ ಯಾವುದಾದರೂ ಒಂದು ಮನೆಯಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

ADVERTISEMENT

ವಾಸ್ತವ್ಯ ಮಾಡುವ ಮನೆಯಲ್ಲಿ ದಿನಂಪ್ರತಿ ತಯಾರಿಸುವ ಆಹಾರವನ್ನು ಸೇವಿಸುವುದಾಗಿ ಹಾಗೂ ಯಾವುದೇ ರೀತಿಯ ವಿಶೇಷ ಭೋಜನ, ಸವಲತ್ತು ಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲವೆಂದು ಹಾಗೂ ಸಮ್ಮೇಳನ ನಡೆಯುವ ಸ್ಥಳಕ್ಕೆ ನಡೆದುಕೊಂಡೇ ಹೋಗುವ ವ್ಯವಸ್ಥೆಗೆ ನನ್ನ ಆದ್ಯತೆ ಎಂದೂ ತಿಳಿಸಿದ್ದಾರೆ.

ಅಜ್ಜಯ್ಯನ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಇರುವ ಯಾವುದಾದರೂ ಮನೆಯವರು ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲು ಇಚ್ಛಿಸುವವರು ಸೋಮಶೇಖರ್ ರಾಥೋಡ – 94806 28398 ಸಂಪರ್ಕಿಸಲು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.