ADVERTISEMENT

ಕಾಮಗಾರಿಗಳನ್ನು ಯಾವಾಗ ಪೂರ್ಣಗೊಳಿಸುತ್ತೀರಿ: ಹಿರಿಯ ನಾಗರಿಕರ ಬಳಗ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 12:59 IST
Last Updated 27 ಜುಲೈ 2022, 12:59 IST
ಎಸ್.ಎನ್. ತಿಪ್ಪನಗೌಡ್ರ
ಎಸ್.ಎನ್. ತಿಪ್ಪನಗೌಡ್ರ   

ಹಾವೇರಿ:ನಗರದಲ್ಲಿ ಒಳಚರಂಡಿ ಯೋಜನೆ ಮತ್ತು 24x7ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಹಲವು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ನಾಗರಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದುನಗರದ ಹಿರಿಯ ನಾಗರಿಕರ ಬಳಗದ ಮುಖಂಡ ಎಸ್.ಎನ್. ತಿಪ್ಪನಗೌಡ್ರ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‌ಎಲ್ಲೆಂದರಲ್ಲಿ ರಸ್ತೆ ಮಧ್ಯೆ ಗುಂಡಿ ತೋಡುವುದು, ಮುಚ್ಚುವುದು ನಡೆದೇ ಇದೆ. ನಗರಕ್ಕೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ನಿರಂತರ ನೀರು ಯೋಜನೆಯ ಉದ್ದೇಶವೇ ಈಡೇರಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಎರಡು ಯೋಜನೆ ಯಾವಾಗ ಮುಗಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಆಶ್ವಾಸನೆ ಮೇಲೆ ನಂಬಿಕೆಯಿಲ್ಲ:

ADVERTISEMENT

ಶಾಸಕ ನೆಹರು ಓಲೇಕಾರ ಮತ್ತು ನಗರಸಭೆ ಅಧ್ಯಕ್ಷರಿಗೂ ಮನವಿ ನೀಡಲಾಗಿದೆ. ಕೆಲ ದಿನಗಳ ಹಿಂದೆ ನಗರಸಭೆ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. 24x7 ನೀರು ಪೂರೈಕೆ ಯೋಜನೆ ಶೀಘ್ರದಲ್ಲಿ ಮುಗಿಯಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ, ಅವರ ಆಶ್ವಾಸನೆ ಮೇಲೆ ನಂಬಿಕೆ ಇಲ್ಲವಾಗಿದೆ ಎಂದು ಹೇಳಿದರು.

ಈ ಎರಡು ಯೋಜನೆಗಳಿಗೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಯುಜಿಡಿ ಯೋಜನೆ ಪ್ರಾರಂಭವಾಗಿ ಅನೇಕ ಕಡೆ ಹಾಳಾಗಿದೆ. ಈ ಬಗ್ಗೆ ನಗರಸಭೆಯವರನ್ನು ಕೇಳಿದರೆ, ಗುತ್ತಿಗೆದಾರರ ಮೇಲೆ ಹಾಕುತ್ತಿದ್ದಾರೆ. ನಿರಂತರ ನೀರು ಯೋಜನೆಯೂ ಅನುಷ್ಠಾನವಾಗಿಲ್ಲ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಅದರ ಪ್ರಯೋಜನ ನಾಗರಿಕರಿಗೆ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ದೂರಿದರು.

ಹಾಳುಬಿದ್ದ ಉದ್ಯಾನಗಳು:

ಬಳಗದ ಸಿ.ಸಿ.ಪ್ರಭುಗೌಡರ ಮಾತನಾಡಿ, ‘ನಗರದಲ್ಲಿ ಚರಂಡಿ ಸ್ವಚ್ಛಗೊಳಿಸುವುದು, ಕಸ ತೆಗೆಯಲು ವ್ಯವಸ್ಥೆ ಮಾಡಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ರಸ್ತೆ ಬದಿ ನೆಟ್ಟಿರುವ ಮರಗಳ ಬೇರುಗಳಿಂದ ಕಟ್ಟಡಗಳು, ರಸ್ತೆ, ಪೇವರ್ಸ್‌ ಬಿರುಕು ಬಿಟ್ಟು ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು. ಅನೇಕ ಉದ್ಯಾನಗಳು ಹಾಳು ಬಿದ್ದಿವೆ. ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಅನೇಕ ರಸ್ತೆಗಳು ಹಾಳಾಗಿದ್ದು, ದುರಸ್ತಿ ಕಾರ್ಯ ಆಗುತ್ತಿಲ್ಲ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳಗದ ಪ್ರಮುಖರಾದ ಡಾ.ಬಿ.ಸಿ.ಬನ್ನೂರ, ಬಿ.ಎಸ್.ಹಂದ್ರಾಳ, ಎಸ್.ಜಿ.ಕೋರಿಶೆಟ್ಟರ್, ಡಿ.ವಿ.ಹಿರೇಮಠ, ನಾಗರಾಜ ವಿಭೂತಿ, ಕೆ.ಎನ್.ಪಾಟೀಲ, ಎಸ್.ಡಿ.ಚಿಕ್ಕಳ್ಳಿ, ಸಿ.ಎಸ್.ಹೆಬ್ಬಾರ, ಎನ್.ಎನ್.ಸೋಮನಕಟ್ಟಿ ಇದ್ದರು.

***

ಹಾವೇರಿಯಲ್ಲಿ ನವೆಂಬರ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅಷ್ಟರೊಳಗಾಗಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹೋರಾಟ ಅನಿವಾರ್ಯ
– ಎಸ್.ಎನ್. ತಿಪ್ಪನಗೌಡ್ರ, ಹಿರಿಯ ನಾಗರಿಕರ ಬಳಗದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.