ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ಆರಂಭವಾಗಿರುವ ಅನಿರ್ದಿಷ್ಠಾಧಿ ಧರಣಿ ಸತ್ಯಾಗ್ರಹ ಶನಿವಾರವೂ ಮುಂದುವರೆಯಿತು.
3ನೇ ದಿನದ ಪ್ರತಿಭಟನೆಯು ಕನ್ನಡ ಪರ ಸಂಘಟನೆಗಳಾದ ಜಯ ಕರ್ನಾಟಕ ಸಂಘ, ಗಜ ಸೇನೆ ಕಾರ್ಯಕರ್ತರು ಹಾಗೂ ಟಾಟಾ ಗೂಡ್ಸ್ ವಾಹನಗಳ ಹಮಾಲರ ಸಂಘದ ಸದಸ್ಯರ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ಎಪಿಎಂಸಿ ಪ್ರಾಂಗಣದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನೆಹರೂ ವೃತ್ತದ ಮೂಲಕ ಮುಖ್ಯರಸ್ತೆಗೆ ಅಡ್ಡಲಾಗಿ ಹಾಕಿರುವ ಟೆಂಟ್‌ಗೆ ತೆರಳಿತು. ದಾರಿಯುದ್ದಕ್ಕೂ ರಸ್ತೆವಿಸ್ತರಣೆ ವಿರೋಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖ್ಯರಸ್ತೆ ವಿಸ್ತರಣೆ ಆಗುವರೆಗೂ ನಮ್ಮ ಹೋರಾಟ ನಡೆಯಲಿದೆ ಎಂಬ ಸಂದೇಶ ನೀಡಿದರು.
ಮುಖ್ಯರಸ್ತೆಯ ಅಂಗಡಿಗಳು ಬಂದ್: ಶನಿವಾರ ವಾರದ ಸಂತೆಯಾಗಿದ್ದರೂ ಮುಖ್ಯರಸ್ತೆಯಲ್ಲಿನ ಅಂಗಡಿಗಳು ತೆರೆಯಲಿಲ್ಲ. ಪ್ರತಿಭಟನೆ ಕೊನೆಗೊಳ್ಳುವರೆಗೂ ಅಂಗಡಿಗಳನ್ನು ತೆರೆಯದಂತೆ ತಾಕೀತು ಮಾಡಲಾಗಿದೆ. ಶುಕ್ರವಾರ ನಡೆದ ಮಾತಿನ ಚಕಮಕಿಯಿಂದ ವ್ಯಾಪಾರ, ವಹಿವಾಟು ನಡೆಯದೆ ಮುಖ್ಯರಸ್ತೆ ಬಿಕೋ ಎನ್ನುತ್ತಿತ್ತು.
ಪ್ರತಿಭಟನಾಕಾರರು ಸಂಜೆಯವರೆಗೂ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನಗಳನ್ನು ನಿಲ್ಲಿಸಿ ನಿರಂತರ ಭಜನೆಯಲ್ಲಿ ತೊಡಗಿದ್ದರು. ರಸ್ತೆ ವಿಸ್ತರಣೆ ವಿರೋಧಿಗಳನ್ನು ಅಣಕಿಸುವ ಭಜನಾ ಹಾಡುಗಳು ಸದ್ದು ಮಾಡಿದವು.
ಮುಖ್ಯರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ ಛಲವಾದಿ, ಗೌರಾಧ್ಯಕ್ಷ ಗಂಗಣ್ಣ ಎಲಿ, ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್.ಮೋರಿಗೇರಿ, ಕನ್ನಡ ಸಂಘಟನೆಗಳ ಕಾರ್ಯಕರ್ತರಾದ ಮಹೇಶ ಯಜನಿ, ಬಸವರಾಜ ಹಾವನೂರ, ಕೃಷ್ಣ ಕರ್ಚಡ, ಬೀರೇಶ ಹಾವನೂರ, ಸುನೀಲ ಉಜನಿ, ಕಿರಣ ಬಾದೋಡಗಿ, ಕಿರಣ ಮಾಳೇನಹಳ್ಳಿ, ಲಿಂಗರಾಜ ಉಜನಿ, ಟಾಟಾ ಗೂಡ್ಸ್ ವಾಹನಗಳ ಹಮಾಲರ ಸಂಘದ ಸಿದ್ದಪ್ಪ ಸಂಕಣ್ಣನವರ, ಇತರರು ಪಾಲ್ಗೊಂಡಿದ್ದರು.
ಪ್ರಯಾಣಿಕರ ಪರದಾಟ
ಹಿರೇಕೆರೂರ ಕಾಗಿನೆಲೆ ಬಡಮಲ್ಲಿ ಹೆಡಿಗ್ಗೊಂಡ ಮಾಸಣಗಿ ಕಡೆ ಹೋಗುವ ಬಸ್‌ಗಳು ಮಾತ್ರ ಬಸ್ ನಿಲ್ದಾಣದಿಂದ ಹೊರಟಿದ್ದವು. ಆದರೆ ಹಿರೇಕೆರೂರನಿಂದ ಬರುವ ಬೇರೆ ಘಟಕದ ಬಸ್‌ಗಳು ನಿಲ್ದಾಣಕ್ಕೆ ಬರದೇ ಹೊರಗಿನಿಂದ ಸಾಗಿದವು.
ಹಾವೇರಿಗೆ ಹೋಗುವ ಪ್ರಯಾಣಿಕರು ಹಳೆ ಪೊಲೀಸ್ ಸ್ಟೇಷನ್ ಬಳಿ ಹತ್ತಬೇಕು. ಬರುವವರು ಸುಭಾಸ್ ವೃತ್ತದಲ್ಲಿ ಇಳಿಯಬಹುದು. ರಾಣೆಬೆನ್ನೂರ ಕಡೆ ಹೋಗುವವರು ಕದರಮಂಡಲಗಿ ರಸ್ತೆಯ ದರ್ಗಾದಿಂದ ಹತ್ತಬಹುದು. ಹೀಗಾಗಿ ಅಲ್ಲಿಂದ ಬರುವ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣ ತಲುಪಲು ತುಂಬಾ ಪ್ರಯಾಸ ಪಡಬೇಕಾಯಿತು.
ಕೆಲವರು ಕಾಲ್ನಡಿಗೆಯಲ್ಲಿ ಸಾಗಿದರೆ ಇನ್ನೂ ಕೆಲವರು ಆಟೊ ಮೂಲಕ ಹೆಚ್ಚಿನ ಹಣ ಸಂದಾಯ ಮಾಡಿ ಸಾಗುತ್ತಿದ್ದುದು ಕಂಡು ಬಂದಿತು.
ಲಿಂಕ್ ರಸ್ತೆಗಳು ಬಂದ್: ಅಂಚೆಕಚೇರಿ ರಸ್ತೆ ಚಾವಡಿ ರಸ್ತೆ ವೈಶ್ಯರ ಗಲ್ಲಿಯ ಲಿಂಕ್ ರಸ್ತೆಗಳಿಗೆ ಮಣ್ಣು ರಾಶಿ ಹಾಕಿದ್ದರಿಂದ ಬೈಕ್ ಸವಾರರು ಬಸಶಂಕರಿ ರಸ್ತೆ ಚಾವಡಿ ರಸ್ತೆಯ ಮೂಲಕ ಕದರಮಂಡಲಗಿ ರಸ್ತೆಯನ್ನು ತಲುಪಬೇಕು. ಹಂಸಭಾವಿ ರಸ್ತೆಗೆ ತಲುಪಲು ಕದರಮಂಡಲಗಿ ರಸ್ತೆಯ ಮೂಲಕ ಕಲಾ ಭವನ ರಟ್ಟಿಹಳ್ಳಿ ರಸ್ತೆಯನ್ನು ತಲುಪಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.