ಹಾವೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 69,667 ಹುದ್ದೆಗಳಿದ್ದು, 39,139 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 30,528 ಹುದ್ದೆಗಳು ಖಾಲಿ ಉಳಿದಿದ್ದು, ಇವುಗಳ ಭರ್ತಿಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ‘ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘ’ದ ಅಧ್ಯಕ್ಷ ಎ.ಪುಟ್ಟಸ್ವಾಮಿ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ವಿಶೇಷ ಭತ್ಯೆ ನೀಡಿದಂತೆ, ಅರೆ ವೈದ್ಯಕೀಯ ಸಿಬ್ಬಂದಿಗೂ ಅರ್ಹತೆಗನುಗುಣವಾಗಿ ವಿಶೇಷ ಭತ್ಯೆ ನೀಡಬೇಕು. ಆರೋಗ್ಯ ಇಲಾಖೆ ಜತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸಬೇಕು. ರಾಜ್ಯದಾದ್ಯಂತ ಇರುವ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಬೋಧನಾ ಸಂಸ್ಥೆಗೆ ಹೊಂದಿಕೊಂಡಿರುವ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಇಲಾಖೆ ನೌಕರರ ದಿನಾಚರಣೆ ಘೋಷಣೆಯಾಗಬೇಕು, ನಿಗದಿತ ಅವಧಿಯಲ್ಲಿ ವೇತನ ಪಾವತಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಾತಿಗಾಗಿ ಕೆಲಸ ಮಾಡದೆ ಸಾರ್ವಜನಿಕ ಸೇವೆಗಾಗಿ ಕೆಲಸ ಮಾಡುತ್ತಾರೆ. ಹಾಗಾಗಿ, ಅವೈಜ್ಞಾನಿಕ ಮತ್ತು ಅಪ್ರಸ್ತುತವಾದ ಬಯೋಮೆಟ್ರಿಕ್ ವ್ಯವಸ್ಥೆಯಿಂದ ವಿನಾಯಿತಿ ನೀಡಬೇಕು. ಮಾರ್ಚ್ ತಿಂಗಳಲ್ಲಿ ಆರೋಗ್ಯ ಇಲಾಖೆ ನೌಕರರ ರಾಜ್ಯ ಸಮ್ಮೇಳನವನ್ನು ಆಯೋಜಿಸಿ, ಸಂಘಟನೆಯನ್ನು ಗಟ್ಟಿಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ, ಗೌರವಾಧ್ಯಕ್ಷ ಆರ್.ಶ್ರೀನಿವಾಸ್, ಬೈಲಾ ಕಮಿಟಿ ಪ್ರಧಾನ ಸಂಚಾಲಕ ಪ್ರಕಾಶ್ ಗಿಡ್ಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.