ADVERTISEMENT

ಮನರೇಗಾ ಬದಲು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ- ಸಂಜೀವಕುಮಾರ ನೀರಲಗಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:13 IST
Last Updated 13 ಜನವರಿ 2026, 3:13 IST
<div class="paragraphs"><p>ಸಂಜೀವಕುಮಾರ ನೀರಲಗಿ</p></div>

ಸಂಜೀವಕುಮಾರ ನೀರಲಗಿ

   

ಹಾವೇರಿ: ‘ಗ್ರಾಮೀಣ ಜನರ ಬದುಕಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)’ ಹೆಸರು ಹಾಗೂ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಇದನ್ನು ವಿರೋಧಿಸಿ ಜ. 18ರಂದು ಒಂದು ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸದಾಗಿ ತಂದಿರುವ ‘ವಿಕಸಿತ ಭಾರತ್ ಗ್ರಾಮ ಜಿ ಕಾಯ್ದೆ’ಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂಬುದು ನಮ್ಮ ಆಗ್ರಹ. ಇದಕ್ಕಾಗಿ ತಾಲ್ಲೂಕು, ಬ್ಲಾಕ್‌ ಹಾಗೂ ಜಿಲ್ಲಾಮಟ್ಟದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು’ ಎಂದರು.

ADVERTISEMENT

‘ಹೋರಾಟದ ಮೊದಲ ಭಾಗವಾಗಿ ಜ.18ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮೈಲಾರ ಮಹದೇವಪ್ಪ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಜಿಲ್ಲೆಯ ಎಲ್ಲ ಶಾಸಕರು ಹಾಗೂ ಮುಖಂಡರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಮನರೇಗಾ ಸಹಾಯಕವಾಗಿತ್ತು. ಈಗ ಗಾಂಧೀಜಿ ಅವರ ಹೆಸರನ್ನೇ ಕಿತ್ತುಹಾಕುವ ಮೂಲಕ, ಕೇಂದ್ರ ಸರ್ಕಾರ ಅವರಿಗೆ ಅಪಮಾನ ಮಾಡಿದೆ. ಜೊತೆಗೆ, ಕಾಯ್ದೆಯ ಸ್ವರೂಪವನ್ನೂ ಬದಲಿಸಿ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದು ದೂರಿದರು.

‘ನಿರ್ಮಲ ಭಾರತ ಯೋಜನೆಯನ್ನು, ಸ್ವಚ್ಛ ಭಾರತ ಮಾಡಿದ್ದಾರೆ. ಇಂದಿರಾಗಾಂಧಿ ಆವಾಸ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮಾಡಿದ್ದಾರೆ. ಈಗ ಮನರೇಗಾ ಯೋಜನೆಯ ಹೆಸರನ್ನೂ ಬದಲಾಯಿಸಿದ್ದಾರೆ. ಈ ಮೂಲಕ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಕೀಳುಮಟ್ಟದ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜನರನ್ನು ಜೀತ ಪದ್ದತಿಯಲ್ಲಿ ಸಿಲುಕಿಸುವ ಷಡ್ಯಂತ್ರ ಇದಾಗಿದೆ’ ಎಂದು ಆರೋಪಿಸಿದರು.

ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ‘ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಕಾಮಧೇನುವಾಗಿತ್ತು. ಈಗ ಅದೇ ಯೋಜನೆಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ನೀಡಿದೆ. ಗ್ರಾಮೀಣ ಭಾಗದಲ್ಲಿ ಹೊಸ ಕಾಯ್ದೆ ಮಾರಕವಾಗಿದೆ. ಜನರ ಕೈಯಲ್ಲಿದ್ದ ಉದ್ಯೋಗವನ್ನು, ಗುತ್ತಿಗೆದಾರರ ಕೈಗೆ ನೀಡುವ ಹುನ್ನಾರ ಇದಾಗಿದೆ’ ಎಂದು ದೂರಿದರು.

ಮುಖಂಡರಾದ ಎಸ್‌.ಎಫ್‌.ಎನ್. ಗಾಜೀಗೌಡ್ರ, ಮಲ್ಲಿಕಾರ್ಜುನ ಬುರಡಿಕಟ್ಟಿ, ಶಂಕರ ಮೆಹರವಾಡೆ, ಜಮೀರ್ ಅಹ್ಮದ್ ಜಿಗರಿ ಹಾಗೂ ಇತರರು ಇದ್ದರು.

‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ನಿರೀಕ್ಷೆ’

‘ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವಂತೆ ಎಲ್ಲರೂ ಕೋರಿದ್ದೇವೆ. ಮುಖ್ಯಮಂತ್ರಿ ಸಹ ಭರವಸೆ ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅದು ಘೋಷಣೆಯಾಗುವ ನಿರೀಕ್ಷೆ ಇದೆ’ ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು. ‘ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿ ಕ್ಷೇತ್ರಕ್ಕೂ ಈಗಾಗಲೇ ₹ 50 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಗ್ಯಾರಂಟಿ ಯೋಜನೆ ರೂಪದಲ್ಲಿ ಪ್ರತಿ ಕ್ಷೇತ್ರದ ಜನರಿಗೆ ₹ 250 ಕೋಟಿ ನೇರವಾಗಿ ತಲುಪುತ್ತಿದೆ. ಕಾಲ ಕಾಲಕ್ಕೆ ವಿಶೇಷ ಅನುದಾನಕ್ಕಾಗಿ ಕೋರಲಾಗುವುದು’ ಎಂದರು. ‘ಗ್ರಾಮೀಣ ರಸ್ತೆಗಳ ಸುಧಾರಣೆ ಸಾರಿಗೆ ವ್ಯವಸ್ಥೆ ಸುಧಾರಣೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ವಿವಿಧ ವಿಚಾರಗಳಿಗೆ ಬಜೆಟ್‌ನಲ್ಲಿ ಒತ್ತು ನೀಡುವಂತೆ ಕೋರಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.