ADVERTISEMENT

ಹಾವೇರಿ | ಹೆಣ್ಣನ್ನು ಗೌರವದಿಂದ ಕಾಣಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:35 IST
Last Updated 9 ಮಾರ್ಚ್ 2021, 17:35 IST
ಹಾವೇರಿಯ ಧ್ವನಿ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು 
ಹಾವೇರಿಯ ಧ್ವನಿ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು    

ಹಾವೇರಿ: ‘ಮಹಿಳಾ ಸಮಾನತೆಯ ಹೋರಾಟಕ್ಕೆ ತನ್ನದೇ ಆದ ಇತಿಹಾಸವಿದೆ. ಸಮಾಜವಾದಿ ಆಂದೋಲನದಿಂದ ಪ್ರೇರಿತವಾದ ಈ ಸಮಾನತೆಯು ಇನ್ನೂ ಮುಗಿದಿಲ್ಲ. ಸಮಾನ ನಾಯಕತ್ವ ಮತ್ತು ಸಮತಾ ಸಮಾಜ ನಿರ್ಮಾಣವೇ ಇದರ ಗುರಿ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇಡಾರಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಧ್ವನಿ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಅನೇಕ ಅವಕಾಶಗಳು ಸಿಕ್ಕಿವೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುಖ್ಯವಾಗಿ ಪುರುಷರ ಮನಸ್ಥಿತಿ ಬದಲಾಗಬೇಕು. ತಾಯಂದಿರು ಕೂಡ ಪುತ್ರರಿಗೆ ಚಿಕ್ಕವರಿರುವಾಗಲೇ ಹೆಣ್ಣಿನ ಬಗ್ಗೆ ಗೌರವ ಭಾವನೆ ಇಟ್ಟುಕೊಳ್ಳುವಂತೆ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಕ್ಷಣಾಧಿಕಾರಿ ಶ್ರೀನಿವಾಸ ಆಲದರ್ತಿ ಅಧ್ಯಕ್ಷತೆ ವಹಿಸಿ, ‘ಇಲಾಖೆ ಮಹಿಳೆಯರಿಗೆ ಎಲ್ಲ ಸವಲತ್ತು ಮತ್ತು ಅವಕಾಶಗಳನ್ನು ಕಲ್ಪಿಸುತ್ತಿದೆ. ಜೊತೆಗೆ ಮಹಿಳಾ ಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ’ ಎಂದರು.

ಅತಿಥಿಗಳಾಗಿ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಲೇಖಕಿ ಸಂಕಮ್ಮ ಸಂಕಣ್ಣನವರ, ಕಲಾವಿದ ಕೆ.ಆರ್. ಹಿರೇಮಠ ಆಗಮಿಸಿದ್ದರು.

ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಮಾತೃ ವಂದನಾ ಯೋಜನೆ, ಬೇಟಿ ಬಚಾವ್– ಬೇಟಿ ಪಢಾವ್‌ ಮುಂತಾದ ವಿಷಯಗಳ ಕುರಿತು ವಕೀಲರಾದ ರೆಹನಾ ಚಂದ್ರಪಟ್ಟಣ, ಸುನೀತಾ ತಳವಾರ, ಯಲ್ಲಪ್ಪ ಬಾಲಣ್ಣನವರ, ಭಾಗ್ಯಾ ಗುಬ್ಬೇರ, ಈರಮ್ಮ ಸವಣೂರ, ಬಿಂದು ಬಿ.ಎಂ ಮುಂತಾದವರು ಮಾತನಾಡಿದರು.

ಸ್ಪಂದನಾ ಅಸೋಶಿಯೇಷನ್ ದತ್ತು ಸ್ವೀಕಾರ ಕೇಂದ್ರದಿಂದ ಕೇರಳಾ ಮತ್ತು ತಮಿಳುನಾಡಿನ ದಂಪತಿಗಳಿಗೆ ಇಲ್ಲಿಯ ಎರಡು ದತ್ತು ಮಕ್ಕಳನ್ನು ಹಸ್ತಾಂತರಿಸಲಾಯಿತು.ವಿನಯ ಗುಡಗೂರ ಕಾರ್ಯಕ್ರಮ ನಡೆಸಿಕೊಟ್ಟರು. ಭಾರತಿ ಹಿಂಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಧಾರಾದ ನಿರ್ದೇಶಕಿ ‌ಪರಿಮಳಾ ಜೈನ್‌ ಸ್ವಾಗತಿಸಿದರು. ಶಾಂತಾ ತಿರುಮಲೆ ನಿರೂಪಿಸಿ, ಶೈಲಜಾ ಎ.ಎನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.