ADVERTISEMENT

ಹಾವೇರಿ: ಹೊರಟ್ಟಿಯಿಂದ ಬಿಜೆಪಿಗೆ ಆನೆಬಲ

ಶಾಸಕ ಜಗದೀಶ ಶೆಟ್ಟರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:49 IST
Last Updated 30 ಮೇ 2022, 15:49 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹಾವೇರಿ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಹಿಂದಿನ ಚುನಾವಣೆಗಳಲ್ಲಿ ಬಸವರಾಜ ಹೊರಟ್ಟಿ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಈ ಬಾರಿ ಬಸವರಾಜ ಹೊರಟ್ಟಿ ಬಿಜೆಪಿ ಅಭ್ಯರ್ಥಿಯಾದ ಕಾರಣ ಎರಡು ಶಕ್ತಿಗಳು ಒಂದುಗೂಡಿವೆ. ಹೊರಟ್ಟಿಯಿಂದ ಬಿಜೆಪಿಗೆ ‘ಆನೆಬಲ’ ಬಂದಂತಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ ಹೊರಟ್ಟಿ ಅವರು ‘ಹೋರಾಟದ ಹೊರಟ್ಟಿ’ ಎಂದೇ ಹೆಸರಾಗಿದ್ದಾರೆ. ಸತತ 7 ಬಾರಿ ಗೆದ್ದು, 42 ವರ್ಷ ನಿರಂತರವಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 8ನೇ ಬಾರಿ ಸ್ಪರ್ಧಿಸುತ್ತಿರುವ ಅವರ ಗೆಲುವು ಕಟ್ಟಿಟ್ಟಬುತ್ತಿ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರ ಯಾವ ಸಮಸ್ಯೆಗಳನ್ನೂ ಕಾಂಗ್ರೆಸ್‌ ಬಗೆಹರಿಸಿಲ್ಲ. ‘ಶಿಕ್ಷಕರನ್ನು ಹೆದರಿಸಿ ಹೊರಟ್ಟಿ ಗೆದ್ದು ಬಂದಿದ್ದಾರೆ’ ಎಂಬ ಆರೋಪದಲ್ಲಿ ಹುರುಳಿಲ್ಲ. ಹೆದರಿಸಿದರೆ ಗೆಲ್ಲಲು ಸಾಧ್ಯವಿಲ್ಲ. ಶಿಕ್ಷಕರ ಪ್ರೀತಿ ಸಂಪಾದಿಸಿದರೆ ಮಾತ್ರ ಗೆಲ್ಲಲು ಸಾಧ್ಯ. ‘ಕೈಲಾಗದವರು ಮೈ ಪರಚಿಕೊಂಡರು’ ಎಂಬಂತೆ ಕಾಂಗ್ರೆಸ್‌ ವರ್ತಿಸುತ್ತಿದೆ ಎಂದು ಟೀಕಿಸಿದರು.

ADVERTISEMENT

ತತ್ವ, ಸಿದ್ಧಾಂತ ಬಲಿಕೊಟ್ಟು ಬಿಜೆಪಿ ಸೇರಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ತತ್ವ, ಸಿದ್ಧಾಂತ ಎಂಬುದು ಎಲ್ಲಿಯೂ ಉಳಿದಿಲ್ಲ. ಆರೋಪ ಮಾಡುವ ಕಾಂಗ್ರೆಸ್‌ಗೆ ಯಾವ ತತ್ವವೂ ಇಲ್ಲ. 7 ಬಾರಿ ಗೆದ್ದ ನಾನು ಏನು ಸಾಧನೆ ಮಾಡಿದ್ದೇನೆ ಎಂಬುದನ್ನು ಅಂಕಿಅಂಶ ಸಹಿತವಾಗಿ ‘ಬಸವರಾಜ ಪಥ’ ಎಂಬ ಕೈಪಿಡಿಯಲ್ಲಿ ತಿಳಿಸಿದ್ದೇನೆ. ಆರೋಪ ಮಾಡುವವರು ಇದನ್ನು ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.

‘ಒಳಜಗಳದಿಂದ ಕಾಂಗ್ರೆಸ್‌ ನಿರ್ನಾಮ’
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಳಜಗಳದಿಂದ ಕಾಂಗ್ರೆಸ್‌ ನಿರ್ನಾಮವಾಗಲಿದೆ. ಅವರಿಬ್ಬರ ನಡುವೆ ಸದಾ ಮುಸುಕಿನ ಗುದ್ದಾಟ ನಡೆಯುತ್ತಿರುತ್ತದೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಮೂಲಕ ಕಾಂಗ್ರೆಸ್‌ ಗೆಲುವಿನ ಕನಸು ಕಾಣುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ಮುಳುಗುತ್ತಿರುವ ಹಡಗು’ ಎಂದು ಶಾಸಕ ಜಗದೀಶ ಶೆಟ್ಟರ್‌ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.