ADVERTISEMENT

ಜಕಣಾಚಾರಿಯ ಕಲೆಯ ಸಿರಿ ಚಿರಸ್ಥಾಯಿ: ಸಂಜೀವಕುಮಾರ ನೀರಲಗಿ

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ: ಸಂಜೀವಕುಮಾರ ನೀರಲಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 14:00 IST
Last Updated 30 ಜನವರಿ 2023, 14:00 IST
ಹಾವೇರಿಯ ದಾನೇಶ್ವರಿ ನಗರದ ಪದವಿ ಪೂರ್ವ ಕಾಲೇಜುಗಳ ನೌಕರರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತು ಗಣ್ಯರು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು 
ಹಾವೇರಿಯ ದಾನೇಶ್ವರಿ ನಗರದ ಪದವಿ ಪೂರ್ವ ಕಾಲೇಜುಗಳ ನೌಕರರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತು ಗಣ್ಯರು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು    

ಹಾವೇರಿ: ‘ಸಾಧು, ಸಂತ, ಶರಣರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಎಲ್ಲ ಸಮಾಜಕ್ಕೆ ಬೇಕಾದವರು. ಆ ದಿಸೆಯಲ್ಲಿ ಸೂರ್ಯ ಚಂದ್ರರಿರುವವರೆಗೆ ಶಿಲ್ಪಕಲೆಯಲ್ಲಿ ದಂತಕಥೆ ಬರೆದಿರುವ ಅಮರಶಿಲ್ಪಿ ಜಕಣಾಚಾರ್ಯರು ಜನಮನದ ಇತಿಹಾಸದಲ್ಲಿ ಶಾಶ್ವತವಾಗಿರುತ್ತಾರೆ’ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಸೋಮವಾರ ದಾನೇಶ್ವರಿ ನಗರದ ಪದವಿ ಪೂರ್ವ ಕಾಲೇಜುಗಳ ನೌಕರರ ಭವನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಕಣಾಚಾರ್ಯರು ಮಹಾ ಜ್ಞಾನಿಯಾಗಿದ್ದರು, ಬೇಲೂರು, ಹಳೇಬೀಡು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಅವರು ಕೆತ್ತಿದ ವಿಗ್ರಹಗಳು ಇಂದಿಗೂ ಸಹ ಅಚ್ಚಳಿಯದಂತೆ ಉಳಿದಿವೆ, ಮುಂದೆಯೂ ಉಳಿಯಲಿವೆ. ಅವರು ತಮ್ಮ ಸಂಪೂರ್ಣ ಜೀವನವನ್ನು ನಾಜೂಕಿನ ಕಲೆಗೆ ಮುಡುಪಾಗಿಟ್ಟಿದ್ದರು. ಹೊಯ್ಸಳ, ಚಾಲುಕ್ಯರ ಕಾಲಘಟ್ಟದಲ್ಲಿ ಬಹುತೇಕ ದೇವಾಲಯಗಳು ನಿರ್ಮಾಣವಾದವು. ಅದರಲ್ಲಿ ಬಹುಪಾಲು ಜಕಣಾಚಾರ್ಯರದ್ದಾಗಿತ್ತು ಎಂದರು.

ADVERTISEMENT

ಪದವಿಪೂರ್ವ ಕಾಲೇಜು ಉಪನ್ಯಾಸಕ ಚಂದ್ರಕಾಂತ ಕಮ್ಮಾರ ಮಾತನಾಡಿ, ಜಕಣಾಚಾರ್ಯರು ಶಿಲ್ಪಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಲ್ಲಿನಲ್ಲಿ ತಮ್ಮ ಕೈಚಳಕದಿಂದ ಸಾಕಷ್ಟು ದೇವಾಲಯ ಗೋಡೆ, ದೇವಸ್ಥಾನದ ಆವರಣ, ಕಲಾತ್ಮಕ ಕಂಬ, ದೇವರ ಮೂರ್ತಿ ಸೇರಿದಂತೆ ಶಿಲ್ಪಕಲೆಯಲ್ಲಿ ಸಾಕಷ್ಟು ಸೃಜನಾತ್ಮಕತೆಯನ್ನು ನೀಡಿ ಹೋಗಿದ್ದಾರೆ ಎಂದರು.

ಜಕಣಾಚಾರ್ಯರು ತಾವು ಕೆತ್ತನೆ ಮಾಡಿದ ಕಲೆಗಳಿಗೆ ಎಲ್ಲಿಯೂ ತಮ್ಮ ಹೆಸರು ಹಾಕಿಕೊಂಡವರಲ್ಲ. ಅವರ ಶಿಲ್ಪಕಲೆಯ ಕರುಹುಗಳು ನಮ್ಮ ಜಾನಪದದಿಂದ ತಿಳಿದುಬರುತ್ತದೆ. ಸಾವಿರಾರು ವರ್ಷಗಳ ಇತಿಹಾಸ ತಿಳಿಸುವ ಕಲಾಶಿಲ್ಪವನ್ನು ಬೇಲೂರಿನ ಒಳಾಂಗಣ ನೋಡಿದರೆ ತಿಳಿಯಬಹುದಾಗಿದೆ ಎಂದರು.

ಇತ್ತೀಚೆಗೆ ನಾವೆಲ್ಲ ಸಾಂಪ್ರದಾಯಿಕ ವೃತ್ತಿಯಿಂದ ದೂರವಾಗದೆ ಅದನ್ನು ಬೆಳೆಸಲು ಪ್ರಯತ್ನಿಸಬೇಕು ಅದರೊಂದಿಗೆ ಸಮಾಜವು ಮುಖ್ಯಸ್ಥರಕ್ಕೆ ಬರಬೇಕಾದರೆ ಶಿಕ್ಷಣ ಬಹು ಮುಖ್ಯವಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯ ಮಹೇಂದ್ರ ಬಡಿಗೇರ, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶಪ್ಪ ಕಮ್ಮಾರ, ಗೌರವಾಧ್ಯಕ್ಷ ವಿಠ್ಠಲಾಚಾರ್ಯ ಬಡಿಗೇರ, ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರೇಶ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಸಿ.ಪಿ.ಐ ಸಿದ್ಧಾರೂಢ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.