ADVERTISEMENT

ಹಾಲಿ– ಮಾಜಿ ಶಾಸಕರ ಮುಸುಕಿನ ಗುದ್ದಾಟ

ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಜನಸಂಕಲ್ಪ ಯಾತ್ರೆ: ಫ್ಲೆಕ್ಸ್‌ಗಳ ಅಬ್ಬರ

ಸಿದ್ದು ಆರ್.ಜಿ.ಹಳ್ಳಿ
Published 8 ನವೆಂಬರ್ 2022, 16:23 IST
Last Updated 8 ನವೆಂಬರ್ 2022, 16:23 IST
ಬ್ಯಾಡಗಿ ಪಟ್ಟಣದಲ್ಲಿ ಮಂಗಳವಾರ ನಡೆದ ‘ಬಿಜೆಪಿ ಜನಸಂಕಲ್ಪ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ  –ಪ್ರಜಾವಾಣಿ ಚಿತ್ರ 
ಬ್ಯಾಡಗಿ ಪಟ್ಟಣದಲ್ಲಿ ಮಂಗಳವಾರ ನಡೆದ ‘ಬಿಜೆಪಿ ಜನಸಂಕಲ್ಪ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ  –ಪ್ರಜಾವಾಣಿ ಚಿತ್ರ    

ಹಾವೇರಿ:ಬ್ಯಾಡಗಿ ಪಟ್ಟಣದಲ್ಲಿ ಮಂಗಳವಾರ ನಡೆದ ‘ಜನಸಂಕಲ್ಪ ಯಾತ್ರೆ’ಯು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.

ಪಟ್ಟಣದ ತುಂಬ ಜನಸಂಕಲ್ಪ ಯಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳ ಅಬ್ಬರ ಜೋರಾಗಿತ್ತು. ಆಯ್ದ ಸ್ಥಳಗಳಲ್ಲಿ ಬ್ಯಾನರ್‌, ಫ್ಲೆಕ್ಸ್‌ ಮತ್ತು ಕಟೌಟ್‌ಗಳನ್ನು ಕಟ್ಟುವಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಬಣಗಳ ನಡುವೆ ಪೈಪೋಟಿ ಇರುವುದು ಕಂಡು ಬಂದಿತು. ವೇದಿಕೆಯ ಸುತ್ತಮುತ್ತ ಕಟೌಟ್‌ಗಳು ರಾರಾಜಿಸಿದವು.

ಮನವೊಲಿಕೆಗೆ ಕಸರತ್ತು:

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಮನವೊಲಿಸಿ,2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ಬಳ್ಳಾರಿ ಮತ್ತು ಪಾಟೀಲ ಅವರು ತಮ್ಮ ಹಿಂಬಾಲಕರು ಮತ್ತು ಅಭಿಮಾನಿಗಳ ಮೂಲಕ ಬಲಾಬಲ ಪ್ರದರ್ಶಿಸಿದರು.

ಹಾಲಿ ಮತ್ತು ಮಾಜಿ ಶಾಸಕರ ಹೆಸರನ್ನು ವರಿಷ್ಠರು ಪ್ರಸ್ತಾಪ ಮಾಡುವಾಗ ಮತ್ತು ಈ ಇಬ್ಬರೂ ಭಾಷಣ ಮಾಡುವಾಗ ಹಿಂಬಾಲಕರು ಹರ್ಷೋದ್ಗಾರ ಮಾಡಿದರು. ಕೆಲವರು ಹಾಲಿ ಮತ್ತು ಮಾಜಿ ಶಾಸಕರ ಭಾವಚಿತ್ರವನ್ನೊಳಗೊಂಡ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಿ ವರಿಷ್ಠರ ಗಮನಸೆಳೆಯಲು ಕಸರತ್ತು ನಡೆಸಿದರು.

ನಾನು ಕೂಡ ಆಕಾಂಕ್ಷಿ: ಸುರೇಶಗೌಡ್ರ

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ‘ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದ್ದು, ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೆ ತರುವ ಮೂಲಕ ರೈತರ ನೆರವಿಗೆ ಧಾವಿಸಿದ್ದಾರೆ. ಉಜ್ವಲ ಯೋಜನೆಯಿಂದ ಗ್ರಾಮೀಣ ಮಹಿಳೆಯರು ನೆಮ್ಮದಿಯಿಂದ ಬದುಕುವಂತಾಗಿದೆ. ಕೂಡಲೇ ಮೋಟೆಬೆನ್ನೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಮತ್ತು ರೈತರಿಗೆ 10 ತಾಸು ತ್ರಿಫೇಸ್‌ ವಿದ್ಯುತ್‌ ನೀಡಬೇಕು’ ಎಂದು ಮನವಿ ಮಾಡಿದರು.

ಭಾಷಣದ ಕೊನೆಯಲ್ಲಿ ‘ನಾನು ಕೂಡ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ಟಿಕೆಟ್‌ ಕೊಟ್ಟರೆ ಭಾರಿ ಮತಗಳ ಅಂತರದಿಂದ ಗೆದ್ದು ಬರುತ್ತೇನೆ’ ಎಂದು ಬಹಿರಂಗವಾಗಿ ಹೇಳುವ ಮೂಲಕ ಶಂಖನಾದವನ್ನು ಚುನಾವಣೆಗೂ ಮುನ್ನವೇ ಮೊಳಗಿಸಿದರು. ಆಗ ಹಿಂಬಾಲಕರು ಜೋರಾಗಿ ಸುರೇಶಗೌಡ ಅವರ ಹೆಸರು ಕೂಗುತ್ತಾ ಬೆಂಬಲ ಸೂಚಿಸಿದರು. ಇದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಇರಿಸು ಮುರುಸು ಉಂಟು ಮಾಡಿತು.

ಸಾಧನೆ ಬಿಚ್ಚಿಟ್ಟ ಶಾಸಕ:

ನಂತರ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ‘ಬ್ಯಾಡಗಿ ತಾಲ್ಲೂಕಿನ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಟ್ಟಾರೆ ₹1,600 ಕೋಟಿ ಅನುದಾನ ಒದಗಿಸಿದೆ. ರೈತ ಸಮುದಾಯದ ಬಹುದಿನಗಳ ಕನಸಾಗಿದ್ದ ಆಣೂರು ಮತ್ತು ಬುಡಪನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ₹369 ಕೋಟಿ ಅನುದಾನದಲ್ಲಿ ಪೂರ್ಣಗೊಂಡಿದೆ. ಮುಂದಿನ ತಿಂಗಳು ಅದನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಹೇಳುವ ಮೂಲಕ ತಮ್ಮ ಅವಧಿಯ ಸಾಧನೆಗಳನ್ನು ಬಿಚ್ಚಿಟ್ಟರು.

ವರಿಷ್ಠರ ಜಾಣ ನಡೆ:

ಸಭೆಯಲ್ಲಿ ನಡೆಯುತ್ತಿದ್ದ ಬಲಾಬಲ ಪ್ರದರ್ಶನ ಮತ್ತು ಕಸರತ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಹಾಲಿ ಮತ್ತು ಮಾಜಿ ಸಿಎಂಗಳು, ತಮ್ಮ ಭಾಷಣದಲ್ಲಿ ಯಾರನ್ನೂ ಹೊಗಳದೆ, ಜಾಣ ನಡೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ಹಾಲಿ ಮತ್ತು ಮಾಜಿ ಶಾಸಕರ ಬಲಾಬಲ ಪ್ರದರ್ಶನದಿಂದ ಜನಸಂಪರ್ಕ ಯಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿತ್ತು. ಇದು ಕಾಂಗ್ರೆಸ್‌ಗೆ ಎಚ್ಚರಿಕೆಯ ಕರೆಗಂಟೆ ಎಂಬುದನ್ನು ಬಿಂಬಿಸಲು ಬಿಜೆಪಿ ನಾಯಕರು ಯತ್ನಿಸಿದರು.

ವಿಶೇಷವೆಂದರೆ, ಬ್ಯಾಡಗಿ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಸಹೋದರ ಸಿ.ಆರ್‌. ಬಳ್ಳಾರಿ (ಚನ್ನಪ್ಪ ರುದ್ರಪ್ಪ ಬಳ್ಳಾರಿ) ಅವರು ಜಾಹೀರಾತು ಮತ್ತು ಫ್ಲೆಕ್ಸ್‌ಗಳಲ್ಲಿ ‘2023ರ ಚುನಾವಣೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ’ ಎಂದು ಪ್ರಕಟ ಮಾಡಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಜತೆಗೆ ಚಿಕ್ಕಣಜಿ ಗ್ರಾಮದ ಎಂ.ಎಸ್‌. ಪಾಟೀಲ ಎಂಬುವರು ಕೂಡ ‘ಪ್ರಬಲ ಟಿಕೆಟ್‌ ಆಕಾಂಕ್ಷಿ’ ಎಂದು ಜಾಹೀರಾತು ನೀಡಿರುವುದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಭಾರಿ ಪೈಪೋಟಿ ಇರುವುದಕ್ಕೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.