ಶಿಗ್ಗಾವಿ: ಶಿಗ್ಗಾವಿಯಲ್ಲಿ ಫೆ. 8ರಂದು ನಡೆಯಲಿರುವ ಶಿಗ್ಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ 5ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ವಿಜಯಲಕ್ಶ್ಮಿ ತಿರ್ಲಾಪುರ(ಪುಟ್ಟಿ) ಅವರನ್ನು ತಾಲ್ಲೂಕು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಬಸವರಾಜ ಹೆಸರೂರ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಜಿಲ್ಲಾ ಸಮ್ಮೇಳನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಜ.5 ರಂದು ನಡೆದ ತಾಲ್ಲೂಕು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿಯ ಅವರು ಅಧ್ಯಕ್ಷರ ಆಯ್ಕೆ ತೀರ್ಮಾನವನ್ನು ಪುರಸ್ಕರಿಸಿದ್ದಾರೆ’ ಎಂದರು.
ತಾಲ್ಲೂಕು ಕಸಾಪ ಅದ್ಯಕ್ಷ ನಾಗಪ್ಪ ಬೆಂತೂರ, ಕಳೆದ ನಾಲ್ಕು ಸಮ್ಮೇಳನಗಳನ್ನು ಯಶಸ್ವಿಗೊಳಿಸಲಾಗಿದೆ. ಐದನೇ ತಾಲ್ಲೂಕು ಸಮ್ಮೇಳನ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಜಿಲ್ಲಾದ್ಯಕ್ಷರು ಜಿಲ್ಲಾ ಸಮ್ಮೇಳನದಲ್ಲಿ ತೊಡಗಿಕೊಂಡಿರುವುದರಿಂದ ಅವರ ಅನುಮತಿ ಮೇರೆಗೆ ತಾಲ್ಲೂಕು ಸಮಿತಿಯ ಕೋಶಾಧ್ಯಕ್ಷ ಬಸವರಾಜ ಹೆಸರೂರ ಅವರು ಸಮ್ಮೇಳನ ಅಧ್ಯಕ್ಷರ ಘೊಷಣೆಯನ್ನು ಮಾಡಿದ್ದಾರೆ ಎಂದರು.
ಫೆ.8ರಂದು ನಡೆಯುವ ಸಮ್ಮೇಳನದಲ್ಲಿ ವಿವಿಧ ಸಾಹಿತಿ, ಉಪನ್ಯಾಸಕರಿಂದ ಉಪನ್ಯಾಸಗಳು, ಕವಿಗೋಷ್ಠಿ, ಭವ್ಯ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂದು ಹುಲಗೂರ ರಸ್ತೆಯ ಪಾದಗಟ್ಟಿಯಿಂದ ಚನ್ನಮ್ಮ ಸರ್ಕಲ್ ಮೂಲಕ ಹಾಯ್ದು ಸಂಗನಬಸವ ಮಂಗಲ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷರ ಘೋಷಣೆಯಾಗಿದ್ದು, ಹೀಗಾಗಿ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಅಹ್ವಾನವನ್ನು ಜಿಲ್ಲಾ ಸಮ್ಮೇಳನ ಮುಗಿದ ತಕ್ಷಣ ಅಧಿಕೃತವಾಗಿ ನೀಡಲಾಗುವುದು ಎಂದರು.
ಶಿಗ್ಗಾವಿ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ, ನಿಕಟ ಪೂರ್ವ ಕಸಾಪ ಅಧ್ಯಕ್ಷ ಎಸ್.ಎನ್.ಮುಗಳಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಹುಡೇದಗೌಡ್ರ, ದುಂಡಶಿ ಹೋಬಳಿ ಘಟಕದ ಅದ್ಯಕ್ಷ ಐ.ಎಲ್.ಭೋಸಲೆ, ಕಾರ್ಯದರ್ಶಿ ರಮೇಶ ಹರಿಜನ, ನಿಕಟಪೂರ್ವ ಕೆಎಸ್‌ಜಿಇಎ ಅದ್ಯಕ್ಷ ಸಿ.ಡಿ.ಯತ್ನಳ್ಳಿ, ಸದಸ್ಯರಾದ ಶಂಬು ಕೇರಿ, ಲತಾ ನಿಡಗುಂದಿ, ಪ್ರತಿಭಾ ಗಾಂಜಿ, ಬಸವರಾಜ ಬಮ್ಮಿಗಟ್ಟಿ, ವಿನಾಯಕ ರೇವಣಕರ, ಶಿವನಾಗಪ್ಪ ಶೆಟ್ಟರ, ಎಂ.ಎಚ್.ಬೆಂಡಿಗೇರಿ, ಸಿ.ಎನ್.ಕಲಕೋಟಿ, ಮಲ್ಲಪ್ಪ ಬಾರಕೇರ, ಬಸವರಾಜ ಶಿಗ್ಗಾವಿ ಸೇರಿದಂತೆ ತಾಲ್ಲೂಕಿನ ಕಸಾಪ ಎಲ್ಲ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.