ADVERTISEMENT

ಮಹಾರಾಷ್ಟ್ರದ ಕನ್ನಡ ಪ್ರದೇಶಗಳು ಕರ್ನಾಟಕಕ್ಕೆ ಸೇರ್ಪಡೆಯಾಗಲಿ: ಬೇಕ್ರಿ ರಮೇಶ್‌

ಕದಂಬ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 15:30 IST
Last Updated 26 ನವೆಂಬರ್ 2022, 15:30 IST
ಬೇಕ್ರಿ ರಮೇಶ್‌ 
ಬೇಕ್ರಿ ರಮೇಶ್‌    

ಹಾವೇರಿ:ಮಹಾರಾಷ್ಟ್ರ ರಾಜ್ಯದ ಅಚ್ಚ ಕನ್ನಡ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಸಾಂಗ್ಲಿ ಫಂಡರಾಪುರ ಎಲ್ಲೋರ, ಅಜಂತಾ, ಮುಂಬೈ ನಗರದ ಅರ್ಧ ಭಾಗವನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕದಂಬ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಅಜಂತಾ, ಎಲ್ಲೋರ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ರಾಷ್ಟ್ರಕೂಟರು. ವಚನಗಳ ಕವಿ ಸಿದ್ದರಾಮ ಸೊಲ್ಲಾಪುರದ ಕೆರೆ– ಕಟ್ಟೆಗಳನ್ನು ನಿರ್ಮಿಸಿದರು. ಅಕ್ಕಲಕೋಟೆ, ಸಾಂಗ್ಲಿ, ಬಾಂಬೆಗಳಲ್ಲಿ ಮುಕ್ಕಾಲುಭಾಗ ಕನ್ನಡಿಗರಿದ್ದಾರೆ. ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ ನಿರ್ಮಿಸಿದವರು ಚಾಲುಕ್ಯ ಚಕ್ರವರ್ತಿಗಳು. ಮಹಾರಾಷ್ಟ್ರವನ್ನು ಕನ್ನಡ ಚಕ್ರವರ್ತಿಗಳೇ ಆಳಿದ್ದಾರೆ. ಈ ಎಲ್ಲ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲು ಆಧಾರಸಹಿತ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕೆಂದು ಒತ್ತಾಯಿಸಿದರು.

ಗಡಿ ಕ್ಯಾತೆ:

ADVERTISEMENT

ಮಹಾಜನ್ ಆಯೋಗ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಘೋಷಿಸಿದೆ. ಮಹಾರಾಷ್ಟ್ರ ಸರ್ಕಾರ, ಎಂ.ಇ.ಎಸ್. ಶಿವಸೇನೆ ನಿರಂತರವಾಗಿ ಕನ್ನಡ ನೆಲ, ಕನ್ನಡಿಗರ ಮೇಲೆ ಪುಂಡಾಟಿಕೆ, ದೌರ್ಜನ್ಯ ಆಕ್ರಮಣ ಮಾಡುತ್ತಾ ಬಂದಿದ್ದಾರೆ. ಮಹಾರಾಷ್ಟ್ರದಲ್ಲೂ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ವಿವಾದ ಸುದ್ದಿ ಕೋರ್ಟಿನಲ್ಲಿದ್ದು ಅದಕ್ಕೆ ಅಗತ್ಯವಾದ ಸಿದ್ಧತೆಯನ್ನು ಕರ್ನಾಟಕ ಸರ್ಕಾರ ಮಾಡಿಕೊಳ್ಳಬೇಕು ವಿರೋಧ ಪಕ್ಷಗಳು ಕೂಡ ಕೈ ಜೋಡಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಕಾವೇರಿ, ಮಹದಾಯಿ ನದಿಗಳ ವಿಷಯದಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಕೂಡ ಕನ್ನಡಿಗರ ಮೇಲೆ ಮಲತಾಯಿ ಧೋರಣೆ ತಾಳುತ್ತಿದೆ. ನಮ್ಮ ಕರ್ನಾಟಕ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಕದಂಬ ಸೈನ್ಯದಿಂದ ಡಿ.5ರಿಂದ ಹಂತ–ಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟ ನಡೆಸುತ್ತೇವೆ. ಡಿ.15ರಿಂದ ಹಾವೇರಿ ಜಿಲ್ಲೆಯಲ್ಲೂ ಹೋರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಾವೇರಿ ಜಿಲ್ಲಾ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಬಾಳೂರ, ಮುಖಂಡರಾದ ನಾ.ಮಹದೇವಸ್ವಾಮಿ, ಮೈಸೂರು, ನಾಗರಾಜು ಅಕ್ಕಿ ಆಲೂರು, ಪ್ರಶಾಂತ ಮರಡಿ, ಮಹಾಂತೇಶ, ಶಂಭು ಪಾಟೀಲ, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.