ADVERTISEMENT

ತಂತ್ರಾಂಶದ ಭಾಷೆಯಾಗಿ ಕನ್ನಡ ಬೆಳೆಯಲಿ

ಸಮ್ಮೇಳನ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 17:30 IST
Last Updated 27 ಜನವರಿ 2020, 17:30 IST
ಹಾವೇರಿಯ ರಜನಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು  ಪ್ರಜಾವಾಣಿ ಚಿತ್ರ– ನಾಗೇಶ ಬಾರ್ಕಿ 
ಹಾವೇರಿಯ ರಜನಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು  ಪ್ರಜಾವಾಣಿ ಚಿತ್ರ– ನಾಗೇಶ ಬಾರ್ಕಿ    

ಹಾವೇರಿ: ‘ಇಂಗ್ಲಿಷ್‌ ಭಾಷೆಯ ಪ್ರಭಾವದಿಂದಾಗಿ ಕನ್ನಡ ಭಾಷೆ ಮರೆಮಾಚಿದೆ. ಶಿಕ್ಷಣದಲ್ಲಿ ಮಾತೃಭಾಷೆ ಜಾರಿಗೆ ಬರಬೇಕು. ಐಟಿ–ಬಿಟಿ ಕಂಪನಿಗಳಲ್ಲಿ ಕನ್ನಡ ಅನುಷ್ಠಾನಗೊಳ್ಳಬೇಕು. ಕನ್ನಡ ಭಾಷೆಯನ್ನು ತಂತ್ರಾಂಶ ಭಾಷೆಯಾಗಿ ಬೆಳೆಸಿದರೆ ಕನ್ನಡದ ಭವಿಷ್ಯ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಾವೇರಿ ಜಿಲ್ಲಾ12ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆಯು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಹಾಗೂ ಪ್ರಾಚೀನ ಭಾಷೆಯಾಗಿದೆ. ಕನ್ನಡವು ಬದುಕಿಗೆ ನಿಕಟವಾದ ಭಾಷೆಯಾಗಿದ್ದು, ಅಕ್ಷರಗಳ ಜೊತೆ ಭಾವನೆಗಳನ್ನು ಬೆಸೆಯುವ ಭಾಷೆಯಾಗಿದೆ.ಕನ್ನಡ ಭಾಷೆಯ ಉಳಿವು ಮಧ್ಯ ಕರ್ನಾಟಕದಲ್ಲಿ ಮಾತ್ರ ಸಾಧ್ಯ ಎನ್ನುವಂತಾಗಿದೆ. ಕನ್ನಡ ಏಕೀಕರಣ ಹೋರಾಟ, ಗೋಕಾಕ್ ಚಳವಳಿಯಲ್ಲಿ ಹಾವೇರಿ ಜಿಲ್ಲೆ ಮುಂಚೂಣಿಯಲ್ಲಿದೆ. ಕನ್ನಡಕ್ಕಾಗಿ ಮತ್ತೊಮ್ಮೆ ಗಟ್ಟಿಯಾಗಿ ನಿಲ್ಲಬೇಕಿದೆ’ ಎಂದರು.

ADVERTISEMENT

ಮುಂದಿನ ಸಮ್ಮೇಳನ ಹಾವೇರಿಯಲ್ಲಿ?

ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲೇ ನಡೆಯುವಂತೆ ಸಭೆಯಲ್ಲಿ ನಾವು ಒತ್ತಡ ಹೇರಬೇಕಿದೆ. ಜಿಲ್ಲೆಗೆ ಸಿಕ್ಕಿದ್ದ ಸಮ್ಮೇಳನದ ಭಾಗ್ಯ ಕೆಲ ಗೊಂದಲಗಳಿಂದ ಕೈತಪ್ಪಿ ಹೋಯಿತು. ಎಲ್ಲ ರೀತಿಯ ಪ್ರಭಾವ, ಒತ್ತಡ ಹಾಕಿ ಯಶಸ್ವಿ ಸಮ್ಮೇಳನ ನಡೆಸೋಣ’ ಎಂದರು.

₹2 ಕೋಟಿ ಅನುದಾನ:

ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆಹಾವೇರಿ ನಗರದಲ್ಲಿ7 ಗುಂಟೆ ಜಾಗವನ್ನು ಗುರುತಿಸಿದ್ದು,ಮುಂದಿನ ಬಜೆಟ್‌ನಲ್ಲಿ ₹ ₹ 2 ಕೋಟಿ ಅನುದಾನ ಒದಗಿಸಲಾಗುವುದು. ಡಿಜಿಟಲ್ ಲೈಬ್ರರಿ ಸ್ಥಾಪನೆ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹ ನಿಧಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ವಿಮರ್ಶಕರಾದ ಡಾ.ರಾಜೇಂದ್ರ ಚನ್ನಿ ಅವರು ವಿಶೇಷ ಉಪನ್ಯಾಸ ನೀಡಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹರಸೂರು ಬಣ್ಣದಮಠದ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಶಾಸಕರಾದ ಬಿ.ಸಿ.ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ನೆಹರೂ ಓಲೇಕಾರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿ.ಪ. ಸದಸ್ಯ ಸಿದ್ದರಾಜ ಕಲಕೋಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಸಮ್ಮೇಳನಾಧ್ಯಕ್ಷ ಗಂಗಾಧರ ನಂದಿ ಮತ್ತು ಅವರ ಪತ್ನಿ ಸುಲೋಚನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.