ಹಾವೇರಿ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ ಬಗ್ಗೆ ಕೆಲವರು ಅಪಪ್ರಚಾರ ಮಾಡಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರೆಲ್ಲರೂ ಹಿಂದುಳಿದ ವರ್ಗಗಳ ವಿರೋಧಿಗಳಾಗಿದ್ದು, ಅಂಥವರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಜಾಗೃತ ಕರ್ನಾಟಕ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ವಿನೋದಕುಮಾರ ಇಟಗಿ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆ ಕುರಿತ ಅಪಪ್ರಚಾರದ ಮಾತಿಗೆ ಜನರು ಕಿವಿಗೂಡಬಾರದು. ಸಮೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು’ ಎಂದು ಕೋರಿದರು.
‘ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಲಾಗಿದೆ. ಮೀಸಲಾತಿ ಹಾಗೂ ಜನರ ಸ್ಥಿತಿ–ಗತಿ ಬಗ್ಗೆ ತಿಳಿಯಲು ಪ್ರತಿ 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸುವಂತೆಯೂ ನಿರ್ದೇಶನ ನೀಡಿದೆ. ಅದರಂತೆ ಆಯೋಗವು ಸಮೀಕ್ಷೆ ನಡೆಸುತ್ತಿದೆ. ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು ಹಾಗೂ ಇತರೆ ಸಮುದಾಯಗಳ ಸಾಮಾಜಿಕ– ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಸಮೀಕ್ಷೆ ಅಗತ್ಯವಾಗಿದೆ’ ಎಂದರು.
‘ಸಮೀಕ್ಷೆಯಲ್ಲಿ ತಿಳಿಯುವ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ಯಾರಿಗೆಲ್ಲ ಅನ್ಯಾಯವಾಗಿದೆ ? ಯಾರಿಗೆಲ್ಲ ಮೀಸಲಾತಿ ಬೇಕು ? ಯಾರಿಗೆ ಯಾವೆಲ್ಲ ಸೌಲಭ್ಯ ಕಲ್ಪಿಸಬೇಕು ? ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮೀಕ್ಷೆ ಅನುಕೂಲವಾಗಲಿದೆ’ ಎಂದು ಹೇಳಿದರು.
ರಾಜಕೀಯ ಲಾಭಕ್ಕಾಗಿ ಅಪಪ್ರಚಾರ: ‘ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸರಾಗವಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕೆಲ ರಾಜಕಾರಣಿಗಳು, ತಮ್ಮ ರಾಜಕೀಯ ಲಾಭಕ್ಕಾಗಿ ಅಪಪ್ರಚಾರದ ಮಾತುಗಳನ್ನು ಆಡುತ್ತಿದ್ದಾರೆ. ಇಂಥ ರಾಜಕಾರಣಿಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದು ವಿನೋದಕುಮಾರ ಆಕ್ರೋಶ ಹೊರಹಾಕಿದರು.
‘ಕೇಂದ್ರ ಸಚಿವರಾದ ವಿ. ಸೋಮಣ್ಣ, ಪ್ರಹ್ಲಾದ್ ಜೋಷಿ, ಸಂಸದ ತೇಜಸ್ವಿ ಸೂರ್ಯ ಅವರು ಸಮೀಕ್ಷೆ ಬಗ್ಗೆ ಅಪಪ್ರಚಾರದ ಹೇಳಿಕೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಹ ಸಮೀಕ್ಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇವರೆಲ್ಲರ ವರ್ತನೆ ಖಂಡನೀಯ. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದು ಅವರವರ ವೈಯಕ್ತಿಕ ನಿರ್ಧಾರ. ವೈಯಕ್ತಿಕವಾಗಿ ಮಾಹಿತಿ ತಿರಸ್ಕರಿಸಬಹುದು. ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ’ ಎಂದು ಕಿಡಿಕಾರಿದರು.
‘ಜನಸಾಮಾನ್ಯರ ಪರವಾಗಿ ಹೋರಾಟ ನಡೆಸಲು ಜಾಗೃತ ಕರ್ನಾಟಕ ಸಂಘಟನೆ ಸ್ಥಾಪಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಸಂಘಟನೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.
ಸಂಘಟನೆ ಸದಸ್ಯರಾದ ಶರಣಪ್ಪ ಸಂಗನಾಳ, ಆರ್.ಎಂ. ಅಗಡಿ, ಗಂಗಾಮತ ಸಮಾಜದ ಮಂಜುನಾಥ ಭೋವಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.