ಹಾವೇರಿ: ಹೆಜ್ಜೆಗೊಂದು ಗುಂಡಿ–ತಗ್ಗು, ನೀರು ನಿಂತು ಕೆಸರಾದ ಮಾರ್ಗ, ಉರುಳಿ ಬೀಳುವ ಭಯದಲ್ಲಿ ನಿಧಾನವಾಗಿ ದ್ವಿಚಕ್ರ ವಾಹನ ಚಲಾಯಿಸುವ ಸವಾರರು...
ತಾಲ್ಲೂಕಿನ ಕರ್ಜಗಿ ರಸ್ತೆಯ ದುಸ್ಥಿತಿ ಇದೆ. ಕರ್ಜಗಿ ಗ್ರಾಮದೊಳಗಿನ ಹಾಗೂ ಕರ್ಜಗಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ನಿರಂತರ ಮಳೆಯಿಂದಾಗಿ ಎಲ್ಲೆಂದರಲ್ಲಿ ತಗ್ಗು– ಗುಂಡಿಗಳು ಬಿದ್ದಿವೆ.
ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗುವ ಗುಂಡಿಗಳನ್ನು ತಾತ್ಕಾಲಿಕವಾಗಿ ಕಲ್ಲು–ಮಣ್ಣು ಹಾಕಿ ಮುಚ್ಚುವ ಅಧಿಕಾರಿಗಳು, ಶಾಶ್ವತ ಪರಿಹಾರ ಕೈಗೊಳ್ಳುತ್ತಿಲ್ಲವೆಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಯ ಕೆಲವು ಕಡೆಗಳಲ್ಲಿ ದೊಡ್ಡ ಗಾತ್ರದ ಗುಂಡಿಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಹಾವೇರಿಯಿಂದ ಕರ್ಜಗಿಗೆ ಹೋಗುವ ರಸ್ತೆಯಲ್ಲಿ ಕೆಎಂಎಫ್ ಬಳಿ ಡಾಂಬರ್ ಕಿತ್ತುಹೋಗಿದ್ದು, ಗುಂಡಿಗಳು ಹೆಚ್ಚಾಗಿವೆ. ಈ ಮಾರ್ಗದಲ್ಲಿ ಸಂಚರಿಸುವ ಜನರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ದ್ವಿಚಕ್ರ ವಾಹನ ಸವಾರರು, ಉರುಳಿಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ.
ಕರ್ಜಗಿ ಬಸ್ ನಿಲ್ದಾಣ ಎದುರೇ ಗುಂಡಿಗಳು ಬಿದ್ದು, ಕೆಸರು ಹೆಚ್ಚಾಗಿದೆ. ಕಲಕೋಟಿ ಮಾರ್ಗದ ರಸ್ತೆಯೂ ಹಾಳಾಗಿದ್ದು, ಎಲ್ಲೆಂದರಲ್ಲಿ ತಗ್ಗುಗಳು ಬಿದ್ದಿವೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಅದೇ ಮಳೆ ನೀರು ಗುಂಡಿಯಲ್ಲಿ ನಿಲ್ಲುತ್ತಿದೆ. ಹೀಗೆ, ನಿಂತ ನೀರಿನಿಂದ ಗುಂಡಿಗಳು ಮತ್ತಷ್ಟು ದೊಡ್ಡದಾಗುತ್ತಿವೆ.
ತೇಪೆಯೇ ದುರಸ್ತಿ: ‘ಹಲವು ವರ್ಷಗಳ ಹಿಂದೆಯೇ ನಿರ್ಮಿಸಿರುವ ಕರ್ಜಗಿ ರಸ್ತೆಯಲ್ಲಿ ಪ್ರತಿ ಮಳೆಗಾಲದಲ್ಲೂ ಗುಂಡಿಗಳು ಹೆಚ್ಚು ಬೀಳುತ್ತಿವೆ. ಹೊಸ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದರೂ ಮಾಡುತ್ತಿಲ್ಲ. ಪ್ರತಿ ಬಾರಿಯೂ ಗುಂಡಿಗಳಿಗೆ ಕಲ್ಲು–ಮಣ್ಣು ಹಾಕಿ ತೇಪೆ ಮಾತ್ರ ಹಾಕಲಾಗುತ್ತಿದೆ. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿ ತೇಪೆ ಕಿತ್ತು ಬರುತ್ತಿದೆ’ ಎಂದು ಗ್ರಾಮಸ್ಥ ಮಣಿಕಂಠ ಹೇಳಿದರು.
‘ಗ್ರಾಮದ ಒಂದು ರಸ್ತೆಯನ್ನು ಈಗ ಕಾಂಕ್ರೀಟ್ ಮಾಡಲಾಗುತ್ತಿದೆ. ಈ ಕಾಮಗಾರಿಯೂ ನಿಧಾನವಾಗಿ ನಡೆಯುತ್ತಿದ್ದು, ಬೇಗನೇ ಕಾಮಗಾರಿ ಮುಗಿಸಬೇಕು. ಪದೇ ಪದೇ ಗುಂಡಿಗಳು ಬೀಳುತ್ತಿರುವ ರಸ್ತೆಯಿಂದ ಮುಕ್ತಿ ಕೊಡಿಸಬೇಕು. ಹೊಸ ರಸ್ತೆಯನ್ನು ನಿರ್ಮಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.