ADVERTISEMENT

ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾದ ಕೋವಿಡ್‌ ಸೋಂಕಿತೆ

ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 15:09 IST
Last Updated 4 ಜುಲೈ 2020, 15:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಕೊರೊನಾ ‘ಪಾಸಿಟಿವ್‌’ ಬಂದಿದ್ದ ಸೋಂಕಿತರೊಬ್ಬರು, ಮನೆಯಿಂದ ಕೋವಿಡ್‌ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌ಗಾಗಿ ಬರೋಬ್ಬರಿ 12 ಗಂಟೆ ಕಾದ ಘಟನೆ ಹಾನಗಲ್‌ ತಾಲ್ಲೂಕಿನ ಆರೇಗೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ‌

ಗ್ರಾಮದ ಅರವತ್ತು ವರ್ಷದ ವೃದ್ಧೆಯೊಬ್ಬರಿಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ‘ಪಾಸಿಟಿವ್‌’ ಬಂದಿದೆ ಎಂದು ಶಿರಸಿಯ ತಾಲ್ಲೂಕು ಆಸ್ಪತ್ರೆಯಿಂದ ಕರೆ ಬಂದಿದೆ. ತಕ್ಷಣ ಕುಟುಂಬಸ್ಥರು ಆಶಾ ಕಾರ್ಯಕರ್ತೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಹಾವೇರಿ ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಲಾಗಿದೆ.

ಅನೇಕ ಬಾರಿ ಕರೆ ಮಾಡಿದರೂ ಆ್ಯಂಬುಲೆನ್ಸ್‌ ಬರಲಿಲ್ಲ. ಇದರಿಂದ ಕುಟುಂಬಸ್ಥರು ವಯಸ್ಸಾದ ತಾಯಿಯ ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದರು. ಕೊನೆಗೆ ರಾತ್ರಿ 11.30ರ ಸುಮಾರಿಗೆ ಆ್ಯಂಬುಲೆನ್ಸ್‌ ಆರೇಗೊಪ್ಪ ಗ್ರಾಮಕ್ಕೆ ಬಂದು ಸೋಂಕಿತರನ್ನು ಹಾವೇರಿ ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಗೆ ಕರೆದೊಯ್ದಿದೆ.

ADVERTISEMENT

‘ನಮ್ಮ ತಾಯಿಗೆ ಜ್ವರವಿತ್ತು. ಹಾಗಾಗಿ ಶಿರಸಿಯ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದೆ. ಅಲ್ಲಿ ಕೊರೊನಾ ಲಕ್ಷಣಗಳಿರುವ ಶಂಕೆಯ ಮೇರೆಗೆ ಜುಲೈ 1ರಂದು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರು. ನಂತರ ಜುಲೈ 3ರಂದು ವೈದ್ಯರೊಬ್ಬರು ಕರೆ ಮಾಡಿ ‘ಪಾಸಿಟಿವ್‌’ ಬಂದಿದೆ ಎಂದು ತಿಳಿಸಿದರು. ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ ಕಳುಹಿಸಿ ಎಂದು ಅನೇಕ ಬಾರಿ ಕರೆ ಮಾಡಿದರೂ, ವೈದ್ಯಕೀಯ ಅಧಿಕಾರಿಗಳು ಬೇಜವಾಬ್ದಾರಿತನ ತೋರಿದರು’ ಎಂದು ಸೋಂಕಿತರ ಪುತ್ರ ಆರೋಪ ಮಾಡಿದ್ದಾರೆ.

‘ಹಾನಗಲ್‌ ತಾಲ್ಲೂಕು ಆರೋಗ್ಯಾಧಿಕಾರಿಗೆ ಕರೆ ಮಾಡಿದರೆ, ‘ಹಾವೇರಿಯಿಂದ ಆ್ಯಂಬುಲೆನ್ಸ್‌ ಬರಬೇಕು. ಬಹುಶಃ ಆಸ್ಪತ್ರೆಯಲ್ಲಿ ಹಾಸಿಗೆ‌ ಖಾಲಿಯಿಲ್ಲದ ಕಾರಣ, ಆ್ಯಂಬುಲೆನ್ಸ್‌ ಬರುವುದು ತಡವಾಗಿರಬಹುದು’ ಎಂದು ಉತ್ತರ ಕೊಟ್ಟರು. ವಯಸ್ಸಾದ ಸೋಂಕಿತರನ್ನು ಕರೆದೊಯ್ಯಲು ಈ ರೀತಿ ನಿರ್ಲಕ್ಷ್ಯ ಮಾಡಿದರೆ, ಉಸಿರಾಟದ ಸಮಸ್ಯೆಯಾಗಿ ಜೀವಕ್ಕೆ ತೊಂದರೆಯಾದರೆ ಯಾರು ಗತಿ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಕ್ರಮ ಕೈಗೊಳ್ಳಲಿ’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.