ADVERTISEMENT

ಕೋವಿಡ್‌ ಲಸಿಕಾ ಕಾರ್ಯಕ್ರಮ ಇಂದಿನಿಂದ

ಮೊದಲ ಸುತ್ತಿನಲ್ಲಿ 900 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ: ಡಿಎಚ್‌ಒ ರಾಜೇಂದ್ರ ದೊಡ್ಡಮನಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 3:50 IST
Last Updated 16 ಜನವರಿ 2021, 3:50 IST
ಹಾವೇರಿ ಜಿಲ್ಲಾ ಲಸಿಕಾ ಉಗ್ರಾಣದಲ್ಲಿ ಕೋವಿಡ್‌ ಲಸಿಕೆಗಳನ್ನು ಸಂಗ್ರಹಿಸಿಡಲಾಗಿದೆ 
ಹಾವೇರಿ ಜಿಲ್ಲಾ ಲಸಿಕಾ ಉಗ್ರಾಣದಲ್ಲಿ ಕೋವಿಡ್‌ ಲಸಿಕೆಗಳನ್ನು ಸಂಗ್ರಹಿಸಿಡಲಾಗಿದೆ    

ಹಾವೇರಿ: ‘ಜಿಲ್ಲೆಯ ಕೋವಿಡ್ ವಾರಿಯರ್‌ಗಳಿಗೆಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ಜ.16ರಿಂದ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ ನಾಲ್ಕು ಸಾವಿರ ಡೋಸ್ ಲಸಿಕೆ ಸರಬರಾಜಾಗಿದೆ. ಮೊದಲ ಸುತ್ತಿನಲ್ಲಿ 900 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆ ಹಾಗೂ ಕಬ್ಬೂರ ಪ್ರಾಥಮಿಕ ಕೇಂದ್ರ, ಸವಣೂರ ತಾಲ್ಲೂಕು ಆಸ್ಪತ್ರೆ ಹಾಗೂ ಸವಣೂರ ನಗರ ಆರೋಗ್ಯ ಕೇಂದ್ರ, ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಶಿಗ್ಗಾವಿ ತಾಲ್ಲೂಕು ಆಸ್ಪತ್ರೆ ಸೇರಿ 9 ಕೇಂದ್ರಗಳಿಗೆ ಶುಕ್ರವಾರ ಕೋವಿಶೀಲ್ಡ್ ಲಸಿಕೆಯನ್ನು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ರವಾನಿಸಲಾಗಿದೆ. ಈ ಒಂಬತ್ತು ಕೇಂದ್ರಗಳಲ್ಲಿ ಜ.16ರಂದು ಸಾಂಕೇತಿಕವಾಗಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಸುತ್ತಿನ ಲಸಿಕೆ ನೀಡಿಕೆಯಲ್ಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಈಗಾಗಲೇ ನೋಂದಾಯಿತರಾಗಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸೇರಿ 8691 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದರು.

ADVERTISEMENT

ಲಸಿಕೆ ಕೇಂದ್ರಗಳಲ್ಲಿ ಅಗತ್ಯ ಕೊಠಡಿ, ಸಿಬ್ಬಂದಿ, ತುರ್ತು ನಿಗಾ ಘಟಕ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆರು ಅಡಿ ಅಂತರ ಕಾಯ್ದುಕೊಂಡು ಲಸಿಕೆ ನೀಡಲಾಗಿದೆ. ವ್ಯಾಕ್ಸಿನ್ ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿದ್ದು, ವ್ಯಾಕ್ಸಿನ್ ನೀಡಿಕೆ ನಂತರ 30 ನಿಮಿಷ ನಿಗಾ ಘಟಕದಲ್ಲಿ ಇರಿಸಲಾಗುವುದು. ಅಧಿಕಾರಿಗಳು ಸೇರಿದಂತೆ ಅಗತ್ಯ ಸಿಬ್ಬಂದಿ ಹಾಗೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ನೋಂದಣಿ ವಿವರ

ಬ್ಯಾಡಗಿ ತಾಲ್ಲೂಕಿನಲ್ಲಿ 486 ಜನರಿಗೆ, ಹಾನಗಲ್ ತಾಲ್ಲೂಕಿನಲ್ಲಿ 1147 ಜನರಿಗೆ, ಹಾವೇರಿ ತಾಲ್ಲೂಕಿನ 1872 ಜನರಿಗೆ, ಹಿರೇಕೆರೂರು ತಾಲ್ಲೂಕಿನಲ್ಲಿ 1291 ಜನರಿಗೆ, ರಾಣೆಬೆನ್ನೂರು ತಾಲ್ಲೂಕಿನಲ್ಲಿ 2066 ಜನರು, ಸವಣೂರ ತಾಲ್ಲೂಕಿನಲ್ಲಿ 760 ಜನರಿಗೆ, ಶಿಗ್ಗಾವಿ ತಾಲ್ಲೂಕಿನಲ್ಲಿ 1069 ನೋಂದಾಯಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ 7018 ಹಾಗೂ ಖಾಸಗಿ ಆಸ್ಪತ್ರೆಯ 1673 ಸೇರಿ 8691 ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.