ADVERTISEMENT

ಗುಳೆ ಹೋದವರು ನೆಲೆ ನಿಂತರು

ನೀರಿನ ಮಿತಬಳಕೆ, ಸಾವಯವ ಗೊಬ್ಬರ, ಕೂಡು ಕುಟುಂಬದ ಶ್ರಮದ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡ ಮುಡೂರದ ತಿಪ್ಪೆಗೊಂಡರ ಕುಟುಂಬ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 16:30 IST
Last Updated 24 ಡಿಸೆಂಬರ್ 2018, 16:30 IST
ಅಡಿಕೆ ತೋಟದ ನಡುವೆ ಆಳೆತ್ತರಕ್ಕೆ ಬೆಳೆದು ನಿಂತ ಶುಂಠಿ ಬೆಳೆ
ಅಡಿಕೆ ತೋಟದ ನಡುವೆ ಆಳೆತ್ತರಕ್ಕೆ ಬೆಳೆದು ನಿಂತ ಶುಂಠಿ ಬೆಳೆ   

ಹಾನಗಲ್:ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಮುಡೂರ ಗ್ರಾಮವು, ಅತ್ತ ಉತ್ತರ ಕನ್ನಡದ ಶಿರಸಿ ಹಾಗೂ ಇತ್ತ ಶಿವಮೊಗ್ಗದ ಸೊರಬಕ್ಕೆ ಹೊಂದಿಕೊಂಡಿರುವ ಊರು. ಇದು ಮಲೆನಾಡಿನಂತಿದ್ದರೂ, ಬರ, ಮಳೆ ಕೊರತೆ, ಇಳುವರಿ ಕೊರತೆ, ಅಧಿಕ ರಸಗೊಬ್ಬರ ಬಳಕೆಯಿಂದ ಇಲ್ಲಿನ ತಿಪ್ಪೆಗೊಂಡರ ಕುಟುಂಬದ ಜಮೀನು ಬರಡಾಗಿತ್ತು. ಹೀಗಾಗಿ ಕುಟುಂಬದ ಮೂವರು ಸಹೋದರರು ಶಾಲೆಯನ್ನು ಅರ್ಧಕ್ಕೆ ಬಿಟ್ಟು, ಬದುಕಿನ ಬುತ್ತಿಗಾಗಿ ಗುಳೆ ಹೋಗುತ್ತಿದ್ದರು.

ಸಹೋದರರಾದ ಉಳುವೆಪ್ಪ ತಿಪ್ಪೆಗೊಂಡರ, ಚಂದ್ರಪ್ಪ ತಿಪ್ಪೆಗೊಂಡರ ಹಾಗೂ ಮಲಕಪ್ಪ ತಿಪ್ಪೆಗೊಂಡರಶಿರಸಿಯಲ್ಲಿನ ಅಡಿಕೆ ತೋಟಕ್ಕೆ ತಿಂಗಳುಗಟ್ಟಲೇ ದುಡಿಯಲು ಹೋಗುತ್ತಿದ್ದರು. ಆಗ, ಅಲ್ಲಿನ ಕೃಷಿಕರುಬಾವಿ ತೋಡಿ ತೋಟಕ್ಕೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವುದು, ನೀರು ಇಂಗುವಂತೆ ಮಾಡುವುದು, ರಾಸಾಯನಿಕ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಸುವುದನ್ನು ಕಂಡರು.

ಊರಿಗೆ ವಾಪಸ್ ಬಂದ ಸಹೋದರರು ತಮ್ಮ ಜಮೀನಿನಲ್ಲೂ ಬಾವಿ ತೋಡಿಸಿದರು. ನೀರು ಸಿಕ್ಕಿತು. ಅದರಲ್ಲಿ ಕಲ್ಲಂಗಡಿ, ತರಕಾರಿ ಹಾಗೂ ಭತ್ತ ಬೆಳೆದು ಆರ್ಥಿಕ ಸುಧಾರಣೆ ಕಾಣತೊಡಗಿದರು.

ADVERTISEMENT

ಬಳಿಕ ಕೊಳವೆಬಾವಿ ಕೊರೆಯಿಸಿ ಮಾವಿನ ತೋಟ ಮಾಡಿದರು. ಬಂದ ಲಾಭದಲ್ಲಿ ಅಡಿಕೆ ತೋಟ ಮಾಡಿದರು. ಅಡಿಕೆಯ ಆದಾಯ ಬರುವ ತನಕ ಮಿಶ್ರ ಬೆಳೆಯಾಗಿ ಬಾಳೆ, ಶುಂಠಿ ಬೆಳೆದರು. ಶುಂಠಿಯು ಎಕರೆಗೆ ರೂ.3 ಲಕ್ಷ ಆದಾಯ ನೀಡಿತ್ತು.

‘ಅಡಿಕೆ ತೋಟದಿಂದ 3 ಎಕರೆಯಲ್ಲಿ ಆದಾಯ ಬರುತ್ತಿದೆ. ಇನ್ನುಳಿದ ಅಡಿಕೆ ತೋಟದಲ್ಲಿ ಇಳುವರಿ ಬರಲು ನಾಲ್ಕು ವರ್ಷ ಕಾಯಬೇಕು. ಅದರ ನಡುವಿನ ಇತರ ಬೆಳೆಯು ನಮಗೆ ಅಡಿಕೆ ತೋಟದ ಖರ್ಚು ನೀಗಿಸುತ್ತಿದೆ. ಅಡಿಕೆ ತೋಟದಲ್ಲಿ ಹೆಚ್ಚಾಗಿ ದ್ವಿದಳ ಧಾನ್ಯ ಬೆಳೆಯುತ್ತೇವೆ. ಇದು ಅಡಿಕೆ ಗಿಡಗಳಿಗೆ ಪೋಷಕಾಂಶ ಒದಗಿಸುತ್ತದೆ. ನಮಗೆ ಆದಾಯ ಬರುತ್ತದೆ’ ಎಂದು ಚಂದ್ರಪ್ಪ ತಿಪ್ಪೆಗೊಂಡರ ವಿವರಿಸಿದರು.

ಜಮೀನಿನ ಅಲ್ಲಲ್ಲಿ ಇಂಗು ಗುಂಡಿಗಳ ನಿರ್ಮಾಣ. ಸ್ವತಃ ಸಸಿ ಮಾಡುವುದು ಸೇರಿದಂತೆ ಬಹುಕತೇಕ ಕಾರ್ಯಗಳನ್ನು ತಾವೇ ಮಾಡುತ್ತಾರೆ. ಕೆಲಸ ಹಂಚಿಕೊಂಡು ಒಗ್ಗಟ್ಟಿನಿಂದ ದುಡಿಯುತ್ತಿದ್ದಾರೆ. ದುಡಿಮೆಗೆ ಪತ್ನಿ, ಮಕ್ಕಳು ಸಾಥ್‌ ನೀಡಿದ್ದಾರೆ.

ತಮ್ಮ ಕುಟುಂಬದ 22 ಎಕರೆಯ ಪೈಕಿ 6 ಎಕರೆಯಲ್ಲಿ ಮಾವು, 10 ಎಕರೆಯಲ್ಲಿ ಅಡಿಕೆ ತೋಟವಿದೆ. ಭತ್ತ, ಮೆಕ್ಕೆಜೋಳ, ಕಬ್ಬು, ಶುಂಠಿ, ತೊಗರಿ, ಹೆಸರು, ಉದ್ದು, ಅಲಸಂದಿ ಮತ್ತು ತರಕಾರಿಯನ್ನೂ ಬೆಳೆಯುತ್ತಿದ್ದಾರೆ. ಪಕ್ಕದ 6 ಎಕರೆ ಜಮೀನು ಲಾವಣಿ ಪಡೆದುಕೊಂಡು, ಕೃಷಿ ವಿಸ್ತರಿಸಿಕೊಂಡಿದ್ದಾರೆ. ಒಟ್ಟು 28 ಎಕರೆ ಜಮೀನಿಗೆ 7 ಕೊಳವೆ ಬಾವಿಗಳ ಮೂಲಕ ಹನಿ ನೀರಾವರಿ ಕಲ್ಪಿಸಿದ್ದಾರೆ.

ಜೊತೆಗೆ 25 ದೇಸಿ ಹಸುಗಳು, 25 ಕುರಿಗಳನ್ನು ಸಾಕುತ್ತಿದ್ದು, ಸೆಗಣಿಯಿಂದ ಸಾವಯವ ಗೊಬ್ಬರ ತಯಾರಿಸುತ್ತಾರೆ. ಅದರ ಜೊತೆಗೆ ಎರೆಹುಳು ಗೊಬ್ಬರ, ಜೀವಾಮೃತ ತಯಾರಿಸುತ್ತಾರೆ. ರಾಸಾಯನಿಕ ಗೊಬ್ಬರದ ಸ್ಪರ್ಶವಿಲ್ಲದ ಇವರ ಕೃಷಿಭೂಮಿಯೂ ಸದಾ ಸ್ಪಂಜಿನಂತೆ ತೇವಗೊಂಡಿರುತ್ತದೆ.

ತಮ್ಮ ಕುಟುಂಬದ 22 ಎಕರೆಯಲ್ಲಿ ವಾರ್ಷಿಕ ₹15 ಲಕ್ಷ ನಿವ್ವಳ ಲಾಭ ಬರುತ್ತಿದೆ ಎನ್ನುತ್ತಾರೆ ತಿಪ್ಪೆಗೊಂಡರ ಕುಟುಂಬದವರು. ಅಂದು ಗುಳೆ ಹೋದವರು, ಇಂದು ನೀರು ಮತ್ತು ಮಣ್ಣಿನ ಮಹತ್ವವನನ್ನು ಅರಿತು ಯಶಸ್ಸು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.