ಅಕ್ಕಿಆಲೂರು: ಹಾನಗಲ್ ತಾಲ್ಲೂಕಿನ ಕೂಡಲ ಮತ್ತು ನಾಗನೂರು ಮಧ್ಯೆ ವರದಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಶ್ರೀನಿವಾಸ ಮಾನೆ ವೀಕ್ಷಿಸಿ, ಕಾಮಗಾರಿ ವಿಳಂಬವಾಗಿದ್ದರಿಂದ ಕೆ.ಆರ್.ಡಿ.ಸಿ.ಎಲ್. ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಶಿರಶ್ಯಾಡ ಅವರನ್ನು ತರಾಟೆಗೆ ತೆಗೆದುಕೊಂಡರು.
‘ಕಾಮಗಾರಿ ಗುತ್ತಿಗೆ ಅವಧಿ ಮುಗಿದು ಹಲವು ವರ್ಷಗಳೇ ಗತಿಸಿದ್ದರೂ ಸೇತುವೆ ನಿರ್ಮಾಣ ಪೂರ್ಣಗೊಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಸುತ್ತಲಿನ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ತಮ್ಮ ಹೊಲ–ಗದ್ದೆಗಳಿಗೆ ತೆರಳಲು ಹತ್ತಾರು ಕಿ.ಮೀ ಸುತ್ತಾಡಬೇಕಿದೆ. ಕಾಮಗಾರಿ ಬೇಗ ಪೂರ್ಣಗೊಳಿಸಿ’ ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಸೇತುವೆಯ ಮುಂದುವರೆದ ಕಾಮಗಾರಿ ಕೈಗೊಳ್ಳಲು ವಿಸ್ತೃತ ವರದಿ ಸಲ್ಲಿಸಿ ಎಂದು ಸೂಚನೆ ನೀಡಿದರು.
ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಸೂಚಿಸಿದರು.
ಬಳಿಕ ಬಾಳಂಬೀಡ ಗ್ರಾಮದಲ್ಲಿ ವರದಾ ನದಿ ಹಿನ್ನೀರು ನುಗ್ಗುತ್ತಿರುವ ಕೃಷಿ ಭೂಮಿಯನ್ನು ವೀಕ್ಷಿಸಿದರು. ವರದಾ ನದಿ ಹಿನ್ನೀರಿನಿಂದ 77 ಹೆಕ್ಟೇರ್ ಕೃಷಿಭೂಮಿಗೆ ನೀರು ನುಗ್ಗುತ್ತಿದೆ. ಹೆಚ್ಚು ಮಳೆ ಸುರಿದ ಸಂದರ್ಭದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಇದರಿಂದ ರೈತರು ಸಾಕಷ್ಟು ಹಾನಿ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ವರದಾ ನದಿಗೆ ತಡೆಗೋಡೆ ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಇಇ ಪ್ರಹ್ಲಾದ್ ಶೆಟ್ಟಿ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ತಹಶೀಲ್ದಾರ್ ರೇಣುಕಾ ಎಸ್., ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ವಿಜಯಕುಮಾರ ದೊಡ್ಡಮನಿ ಸೇರಿದಂತೆ ಹಲವು ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.