ADVERTISEMENT

ಹಾವೇರಿ: ಪೊಲೀಸ್ ಇಲಾಖೆಗೆ ನೀಡಿದ್ದ ಜಾಗ ವಾಪಸು

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:53 IST
Last Updated 22 ಮೇ 2025, 15:53 IST
ಹಾವೇರಿ ಗಾಂಧಿವೃತ್ತ ಬಳಿ ಇರುವ ಹಳೇ ಎಸ್ಪಿ ಕಚೇರಿ ಕಟ್ಟಡ
ಹಾವೇರಿ ಗಾಂಧಿವೃತ್ತ ಬಳಿ ಇರುವ ಹಳೇ ಎಸ್ಪಿ ಕಚೇರಿ ಕಟ್ಟಡ   

ಹಾವೇರಿ: ಇಲ್ಲಿಯ ಗಾಂಧಿವೃತ್ತ ಬಳಿ ಪೊಲೀಸ್ ಇಲಾಖೆಗೆ ನೀಡಿದ್ದ 27 ಗುಂಟೆ ಜಾಗವನ್ನು ಕಂದಾಯ ಇಲಾಖೆ ವಾಪಸು ಪಡೆದಿದ್ದು, ಅದೇ ಸ್ಥಳದಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಿಸುವ ಪ್ರಕ್ರಿಯೆ ತೆರೆಮರೆಯಲ್ಲಿ ಆರಂಭವಾಗಿದೆ.

ನಗರದ ಹೃದಯ ಭಾಗದಲ್ಲಿರುವ ಸಿಟಿಎಸ್ ನಂಬರ್ 779ರ 27 ಗುಂಟೆ ಜಾಗವನ್ನು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿ ನಿರ್ಮಾಣಕ್ಕಾಗಿ ಕೆಲ ವರ್ಷಗಳ ಹಿಂದೆಯಷ್ಟೇ ಹಸ್ತಾಂತರಿಸಲಾಗಿತ್ತು. ಆದರೆ, ಹಳೇ ಪಿ.ಬಿ. ರಸ್ತೆಯಲ್ಲಿ ಹೊಸದಾಗಿ ಎಸ್ಪಿ ಕಚೇರಿ ನಿರ್ಮಿಸಲಾಗಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಪ್ರಕಾರ ಕಂದಾಯ ಇಲಾಖೆಯಿಂದ ಮಂಜೂರಾದ 27 ಗುಂಟೆಯಲ್ಲಿ ಪೊಲೀಸ್ ಇಲಾಖೆಯ ವಿವಿಧ ಕಚೇರಿಗಳಿವೆ. ಮೂಲ ಉದ್ದೇಶಕ್ಕಾಗಿ ಜಾಗ ಬಳಕೆಯಾಗಿಲ್ಲ. ಇದೇ ಕಾರಣಕ್ಕೆ ಜಾಗದ ಬಗ್ಗೆ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, 27 ಗುಂಟೆ ಜಾಗದ ಹಸ್ತಾಂತರ ಆದೇಶವನ್ನು ರದ್ದುಪಡಿಸಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಪೊಲೀಸ್ ಇಲಾಖೆಯಿಂದ ಜಾಗವನ್ನು ವಾಪಸು ಪಡೆಯುವಂತೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಸರ್ಕಾರವೂ ಅದಕ್ಕೆ ಒಪ್ಪಿಗೆ ನೀಡಿದೆ. ಹೀಗಾಗಿ, ಪೊಲೀಸ್ ಇಲಾಖೆಗೆ ಜಾಗ ನೀಡಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಹಾವೇರಿ ತಹಶೀಲ್ದಾರ್ ಅವರು, ತಾಲ್ಲೂಕು ಆಡಳಿತ ಸೌಧ ನಿರ್ಮಾಣದ ಉದ್ದೇಶಕ್ಕಾಗಿ ಜಾಗವನ್ನು ಕಂದಾಯ ಇಲಾಖೆಗೆ ಕಬ್ಜಾ ಪಾವತಿಯೊಂದಿಗೆ ವಾಪಸು ಪಡೆದು ವರದಿ ಸಲ್ಲಿಸಬೇಕು. ನಗರ ಭೂ ಮಾಪಕರು, ದಾಖಲೆಯಲ್ಲಿ ಅಮಲು ಬಜಾವಣೆ ಮಾಡಬೇಕು’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಭ್ಯಂತರವಿಲ್ಲವೆಂದ ಜಿಲ್ಲಾ ಎಸ್ಪಿ: ‘ಹಾವೇರಿಯ ಮೈಲಾರ ಮಹದೇವಪ್ಪ ರೈಲು ನಿಲ್ದಾಣದ ಎದುರಿನ ಜಾಗದಲ್ಲಿ ತಾಲ್ಲೂಕು ಆಡಳಿತ ಸೌಧವಿದ್ದು, ಈ ಕಟ್ಟಡ ಹಳೆಯದ್ದಾಗಿದೆ. ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಉಪ ನೋಂದಣಾಧಿಕಾರಿ, ಭೂಮಾಪನ ಇಲಾಖೆ ಕಚೇರಿಗಳು ಈ ಕಟ್ಟಡದಲ್ಲಿವೆ. ಆದರೆ, ಈ ಕಟ್ಟದ ಮಳೆ ಬಂದ ಸಂದರ್ಭದಲ್ಲಿ ಹಲವು ಕಡೆ ಸೋರುತ್ತಿದೆ’ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿತ್ತು.

‘ಕಟ್ಟಡದ ಎದುರಿನ ರಸ್ತೆ ಕಿರಿದಾಗಿದೆ. ಅಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೆಲಸ ಮಾಡಲು ತೊಂದರೆ ಉಂಟಾಗುತ್ತಿದೆ. ಹೀಗಾಗಿ, ತಾಲ್ಲೂಕು ಆಡಳಿತ ಸೌಧದ ಕಚೇರಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕಿದೆ. ಇದರಿಂದಾಗಿ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಲಾಗಿತ್ತು.

‘ನಗರದ ಮಧ್ಯಭಾಗದಲ್ಲಿರುವ ಗಾಂಧಿವೃತ್ತದ ಬಳಿ ಪೊಲೀಸ್ ಇಲಾಖೆಗೆ ನೀಡಿದ್ದ 27 ಗುಂಟೆ ಜಾಗವನ್ನು ವಾಪಸು ಪಡೆದು ನೀಡಿದರೆ, ತಾಲ್ಲೂಕು ಆಡಳಿತ ಸೌಧ ನಿರ್ಮಿಸಲು ಅನುಕೂಲವಾಗಲಿದೆ’ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಸ್ತಾವದ ಬಗ್ಗೆ ಜಿಲ್ಲಾ ಎಸ್ಪಿ ಅವರಿಗೆ ತಿಳಿವಳಿಕೆ ಪತ್ರ ನೀಡಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಎಸ್ಪಿ, ಜಾಗ ವಾಪಸು ಪಡೆಯಲು ಯಾವುದೇ ಅಭ್ಯಂತರವಿಲ್ಲವೆಂದು ಉತ್ತರಿಸಿದ್ದಾರೆ. ಹೀಗಾಗಿ, ಜಾಗವನ್ನು ಪೊಲೀಸ್ ಇಲಾಖೆಯಿಂದ ವಾಪಸು ಪಡೆದು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಹೊಸ ಆದೇಶ ಹೊರಬಿದ್ದಿದೆ.

₹5 ಕೋಟಿ ಬಿಡುಗಡೆಗೆ ಆಗ್ರಹ: ‘ಪೊಲೀಸ್ ಇಲಾಖೆಗೆ ನೀಡಿದ್ದ ಜಾಗವನ್ನು ವಾಪಸು ಪಡೆಯುವಂತೆ ಸರ್ಕಾರವನ್ನು ಹಲವು ಬಾರಿ ಒತ್ತಾಯಿಸಲಾಗಿತ್ತು. ಇದೀಗ, ಜಾಗ ವಾಪಸು ಪಡೆಯಲಾಗಿದೆ. ನಮ್ಮ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಅಭಿನಂದನೆಗಳು’ ಎಂದು ಎಂ.ಎಸ್. ಕೋರಿಶೆಟ್ಟರ ತಿಳಿಸಿದರು.

‘ಸದ್ಯದ ತಾಲ್ಲೂಕು ಆಡಳಿತ ಸೌಧ ರೈಲ್ವೆ ನಿಲ್ದಾಣ ಬಳಿಯಿದೆ. ಇದರಿಂದ ಜನರಿಗೆ ಹೋಗಿ ಬರಲು ತೊಂದರೆ ಉಂಟಾಗುತ್ತಿದೆ. ಗಾಂಧಿವೃತ್ತದ ಬಳಿಯೇ ತಾಲ್ಲೂಕು ಆಡಳಿತ ಸೌಧ ನಿರ್ಮಾಣವಾದರೆ ಜನರಿಗೆ ಅನುಕೂಲವಾಗಲಿದೆ. ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹ 5 ಕೋಟಿ ಮಂಜೂರು ಮಾಡಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.