ADVERTISEMENT

ಬೆಳೆ ಸಮೀಕ್ಷೆ ಕಾರ್ಯ ಉತ್ಸವದಂತಿರಲಿ

ವಿಡಿಯೊ ಸಂವಾದದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 15:59 IST
Last Updated 13 ಆಗಸ್ಟ್ 2020, 15:59 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಸಚಿವರ ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಸಿಇಒ ರಮೇಶ ದೇಸಾಯಿ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು 
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಸಚಿವರ ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಸಿಇಒ ರಮೇಶ ದೇಸಾಯಿ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು    

ಹಾವೇರಿ: ಬೆಳೆ ಸಮೀಕ್ಷೆ ಕಾರ್ಯವನ್ನು ಒಂದು ಉತ್ಸವದ ಮಾದರಿಯಲ್ಲಿ ಕೈಗೊಳ್ಳಬೇಕು. ಎಲ್ಲ ಅಧಿಕಾರಿಗಳು ಹಾಗೂ ರೈತರು, ಜನಪ್ರತಿನಿಧಿಗಳು ಭಾಗವಹಿಸುವಿಕೆ ಮೂಲಕ ಯಶಸ್ವಿಗೊಳಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದರು.

ಬೆಂಗಳೂರಿನ ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಿಂದ ಹಾವೇರಿ ಜಿಲ್ಲಾಡಳಿತ ಸೇರಿದಂತೆ ರಾಜ್ಯದ ಜಿಲ್ಲಾಡಳಿತದೊಂದಿಗೆ ವಿಡಿಯೊ ಸಂವಾದ ನಡೆಸಿ ಬೆಳೆ ಸಮೀಕ್ಷೆ ಕಾರ್ಯ ಕೇವಲ ಕೃಷಿ ಇಲಾಖೆ ಕಾರ್ಯವೆಂದು ಭಾವಿಸದೇ ಎಲ್ಲ ಇಲಾಖಾ ಅಧಿಕಾರಿಗಳು ಭಾಗವಹಿಸಿ ಬೆಳೆ ಸಮೀಕ್ಷೆಯನ್ನು ಆಯಾ ರೈತರಿಂದಲೇ ಮಾಡಿಸಿ ಅಪ್‍ಲೋಡ್ ಮಾಡಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ 2.10 ಕೋಟಿ ಹಿಡುವಳಿದಾರರಿದ್ದಾರೆ. ಮುಖ್ಯ ಹಿಡುವಳಿದಾರರ ಜೊತೆಗೆ ಹಿಸ್ಸಾ ಜಮೀನಿನ ರೈತರು ಬೆಳೆ ಸಮೀಕ್ಷೆ ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಬೇಕು. ಫಾರ್ಮರ್ ಕ್ರಾಪ್ ಸರ್ವೆ ಆ್ಯಪ್‌ ಬಳಸಿ ರೈತರೇ ತಮ್ಮ ಹೊಲದಲ್ಲಿ ನಿಂತು ಬೆಳೆಯ ಫೋಟೋ ಜೊತೆಗೆ ತಮ್ಮ ಫೋಟೋವನ್ನು ಕ್ಲಿಕ್ಕಿಸಿ ಅಪ್‍ಲೋಡ್ ಮಾಡಬೇಕು.

ADVERTISEMENT

ಸ್ವಾಭಿಮಾನಿ ರೈತ ತನ್ನ ಹೊಲದ ಸಮೀಕ್ಷೆಯನ್ನು ತಾನೇ ನಡೆಸಿ ರೈತನೇ ತನ್ನ ಬೆಳೆಯ ಬಗ್ಗೆ ಪ್ರಮಾಣಪತ್ರ ಕೊಡುವಂತಹ ವಿಶೇಷ ಯೋಜನೆ ಇದು. ಕೃಷಿ ಸಹಾಯಕ ನಿರ್ದೇಶಕರು ಸ್ಥಳೀಯ ಶಾಸಕರನ್ನು ರೈತರ ಹೊಲಕ್ಕೆ ಕರೆದುಕೊಂಡು ಹೋಗಿ ರೈತರಿಂದಲೇ ಬೆಳೆಸಮೀಕ್ಷೆ ಫೋಟೋ ಅಪ್‍ಲೋಡ್ ಮಾಡಿಸಬೇಕು ಎಂದರು.

ಆಗಸ್ಟ್ 24 ಕೊನೆಯ ದಿನವಾಗಿದ್ದು, ಈ ಅವಧಿಯೊಳಗೆ ಜಿಲ್ಲೆಯ ಎಲ್ಲ ಹಿಡುವಳಿದಾರರು ಅಪ್‍ಲೋಡ್ ಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಪ್ರದೀಪ, ಕೃಷಿ ಇಲಾಖೆ ಉಪನಿರ್ದೇಶಕರಾದ ಹಾವೇರಿಯ ಕರಿಯಲ್ಲಪ್ಪ, ರಾಣೆಬೆನ್ನೂರ ವಿಭಾಗದ ಸ್ಪೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.