ಅಕ್ಕಿಆಲೂರು: ಬಿಜೆಪಿಯನ್ನು ಗ್ರಾಮೀಣ ಮಟ್ಟದಿಂದ ಇನ್ನಷ್ಟು ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಬೂತ್ ವ್ಯಾಪ್ತಿಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಗೊಳಿಸಲು ಶ್ರಮ ವಹಿಸಬೇಕು ಎಂದು ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ ಕರೆ ನೀಡಿದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸುರಳೇಶ್ವರ, ಡೊಳ್ಳೇಶ್ವರ, ಹೋತನಹಳ್ಳಿ, ಕುಂಟನಹೊಸಳ್ಳಿ, ಅರಳೇಶ್ವರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಯುವ ಸಮುದಾಯ ಹೆಚ್ಚಿದ್ದು, ಅವರ ಸಾಮರ್ಥ್ಯ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಿದೆ. ಬಿಜೆಪಿ ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುವ ಅಪರೂಪದ ಪಕ್ಷವಾಗಿದೆ. ಇಂಥ ಪಕ್ಷದ ಸದಸ್ಯತ್ವ ಹೊಂದಿ ದೇಶದ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ತಮ್ಮೆಲ್ಲರ ಮುಂದಿದೆ ಎಂದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮಾತನಾಡಿ, ಪ್ರತಿ ಬೂತ್ ವ್ಯಾಪ್ತಿಗಳಲ್ಲಿಯೂ ಸಹ ಗರಿಷ್ಠ ಮಟ್ಟದ ಸದಸ್ಯತ್ವ ನೋಂದಣಿಯಾಗಬೇಕು. ಕಾಲಕ್ಕೆ ತಕ್ಕಂತೆ ಬಿಜೆಪಿ ಸಹ ಆಧುನಿಕತೆಗೆ ಮಾರ್ಪಾಡು ಹೊಂದುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಕ್ಷದ ಸದಸ್ಯರಾಗಲು ಅರ್ಹರು. ಲಿಂಗ, ಜಾತಿ, ಧರ್ಮಗಳ ಬೇಧವಿಲ್ಲದೇ ಪ್ರತಿಯೊಬ್ಬರೂ ಸಹ ಬಿಜೆಪಿಯ ಸದಸ್ಯರಾಗಬಹುದಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಅಕ್ಕಿಆಲೂರು ಮಹಾಶಕ್ತಿ ಕೇಂದ್ರದ ಪ್ರಮುಖ ರಾಜಣ್ಣ ಅಂಕಸಖಾನಿ, ಮಂಡಲ ಕಾರ್ಯದರ್ಶಿ ಸಚಿನ ರಾಮಣ್ಣನವರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.