ADVERTISEMENT

ವೋಟರ್‌ ಐಡಿ: ಆಧಾರ್‌ ಜೋಡಿಸಿ

ಜಿಲ್ಲೆಯಲ್ಲಿ 12,70,288 ಮತದಾರರಿದ್ದಾರೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:05 IST
Last Updated 1 ಆಗಸ್ಟ್ 2022, 16:05 IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿದರು. ಸಿಇಒ ಮೊಹಮ್ಮದ್‌ ರೋಶನ್‌, ಡಿಡಿಪಿಐ ಜಗದೀಶ್ವರ ಬಿ.ಎಸ್‌. ಇದ್ದಾರೆ 
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿದರು. ಸಿಇಒ ಮೊಹಮ್ಮದ್‌ ರೋಶನ್‌, ಡಿಡಿಪಿಐ ಜಗದೀಶ್ವರ ಬಿ.ಎಸ್‌. ಇದ್ದಾರೆ    

ಹಾವೇರಿ: ‘ಮತದಾರರ ಗುರುತಿನ ಚೀಟಿ ಹೊಂದಿರುವ ಜಿಲ್ಲೆಯ ಪ್ರತಿಯೊಬ್ಬ ಮತದಾರರು ತಮ್ಮ ವೋಟರ್ ಐಡಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಈ ಕಾರ್ಯ ಯಶಸ್ವಿಯಾಗಲು ಕಾರ್ಯಪ್ರವೃತ್ತರಾಗಿ ದೋಷರಹಿತ ನಿಖರವಾದ ಮತದಾರರ ಪಟ್ಟಿ ತಯಾರಿಕೆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಆಯೋಜಿಸಿದ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಒಟ್ಟು 1470 ಮತಗಟ್ಟೆಗಳಿವೆ. ದಿನಾಂಕ 01-08-2022ರಿಂದ ಎಲ್ಲಾ ಮತದಾರರ ಪಟ್ಟಿಯ ಪ್ರತಿಯೊಬ್ಬ ಮತದಾರರು ತಮ್ಮ ಹೆಸರಿನೊಂದಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕು. ನಮೂನೆ-6ಬಿ ನಲ್ಲಿ ವಿವರಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಬಿ.ಎಲ್.ಓ.ಗಳಿಗೆ ಸಲ್ಲಿಸಬೇಕು ಅಥವಾ ಸ್ವತಃ ಮತದಾರರೇ ತಮ್ಮ ಮೊಬೈಲ್ ಮುಖಾಂತರ ಆನ್‍ಲೈನ್ ಮೂಲಕ ಚುನಾವಣಾ ಆಯೋಗದ ನಿಗದಿತ ಸಾಫ್ಟ್‌ವೇರ್‌ಗಳ ಮೂಲಕ ಅರ್ಜಿ ಸಲ್ಲಿಸಿ ಆಧಾರ್‌ ಸಂಖ್ಯೆ ಜೋಡಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ 6,51,543 ಪುರುಷ, 6,18,718 ಮಹಿಳೆಯರು ಹಾಗೂ 27 ಜನರ ತೃತೀಯ ಲಿಂಗಿಗಳು ಸೇರಿ 12,70,288 ಮತದಾರರಿದ್ದಾರೆ. ಈಗಾಗಲೇ ಜಿಲ್ಲೆಯ 18 ವರ್ಷ ಮೇಲ್ಪಟ್ಟ 13,51,232 ಜನರಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಎಲ್ಲರೂ ತಮ್ಮ ಆಧಾರ್ ಸಂಖ್ಯೆಗಳನ್ನು ಮತದಾರರ ಚೀಟಿಗೆ ಲಿಂಕ್ ಮಾಡಬೇಕು ಎಂದು ಹೇಳಿದರು.

ಭಾರತ ಚುನಾವಣಾ ಆಯೋಗ ಪ್ರತಿ ಜನವರಿ 1ನೇದಿನಾಂಕವನ್ನು ಮತದಾರರ ಪಟ್ಟಿಯ ಅರ್ಹತಾ ದಿನಾಂಕ ಎಂದು ಪರಿಗಣಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಅಂದರೆ 1ನೇ ಏಪ್ರಿಲ್‌, 1ನೇ ಜುಲೈ, 1ನೇ ಅಕ್ಟೋಬರ್ ಮತ್ತು 1ನೇ ಜನವರಿ ಅರ್ಹತಾ ದಿನಾಂಕ ಎಂದು ನಿಗದಿಪಡಿಸಿದೆ. 17 ವರ್ಷ ಮೇಲಟ್ಟ ಯುವ ಸಮೂಹ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ವರ, ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ಪಕ್ಷದ ಪ್ರಭು ಹಿಟ್ನಳ್ಳಿ, ಭಾರತೀಯ ಕಮ್ಯೂನಿಸ್ಟ್ ಪಕ್ಷದ ರುದ್ರಪ್ಪ ಜಾಬೀನ್, ಜೆಡಿಎಸ್‌ ಪಕ್ಷದ ಅಮೀರಜಾನ ಬೇಪಾರಿ, ಬೇವಿನಹಿಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.