ADVERTISEMENT

ಅಂಗನವಾಡಿ ಅಕ್ಕಿಯಲ್ಲಿ ಹುಳುಗಳು ಪತ್ತೆ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 15:51 IST
Last Updated 17 ಜುಲೈ 2023, 15:51 IST
   

ಹಾನಗಲ್ (ಹಾವೇರಿ ಜಿಲ್ಲೆ): ಅಂಗನವಾಡಿಗಳಿಗೆ ಕಳಪೆ ಮೊಟ್ಟೆ ಪೂರೈಕೆ ಬೆನ್ನಲ್ಲೇ, ಅಕ್ಕಿಯಲ್ಲಿ ಹುಳುಗಳು ಪತ್ತೆಯಾಗಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.  

ಒಂದು ವಾರದ ಹಿಂದೆ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಅಕ್ಕಿ ಪೂರೈಕೆಯಾಗಿದೆ. ದಾಸ್ತಾನು ಮಾಡಿದ್ದ ಅಕ್ಕಿ ಸಂಗ್ರಹ ಮುಕ್ತಾಯದ ಬಳಿಕ ಈಗ ಹೊಸದಾಗಿ ಪೂರೈಕೆಯಾದ ಅಕ್ಕಿ ಚೀಲಗಳನ್ನು ಬಿಚ್ಚಿದಾಗ ಹುಳುಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಅಕ್ಕಿಯನ್ನು ಸ್ವಚ್ಛ ಮಾಡುವಾಗ ಒಂದು ಮೊರದಷ್ಟು ಅಕ್ಕಿಯಲ್ಲಿ ಒಂದು ಹಿಡಿಯಷ್ಟು ಹುಳುಗಳು ಸಿಗುತ್ತವೆ ಎಂಬ ದೂರುಗಳು ಕೇಳಿ ಬಂದಿವೆ. 

‘ಹಾನಗಲ್ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅಕ್ಕಿ ಸ್ವಚ್ಛಗೊಳಿಸುವ ಸಮಯದಲ್ಲಿ ಹುಳುಗಳು ಕಾಣಿಸಿಕೊಂಡ ಬಗ್ಗೆ ದೂರುಗಳು ಬಂದಿವೆ. ಅಕ್ಕಿಯಲ್ಲಿ ಹುಳು ಕಂಡು ಬಂದ ಬಗ್ಗೆ ಕಾರ್ಯಕರ್ತೆಯರು ಸಂಬಂಧಿತ ಮೇಲ್ವಿಚಾರಕಿಯರ ಗಮನಕ್ಕೆ ತಂದಿದ್ದಾರೆ. ಆದರೆ ಈ ವಿಷಯ ಗೋಪ್ಯವಾಗಿಡುವಂತೆ ಒತ್ತಡ ತರಲಾಗುತ್ತಿದೆ’ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪೆಢರೇಶನ್‌ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಒತ್ತಾಯಿಸಿದ್ದಾರೆ.

ADVERTISEMENT

‘ಮಕ್ಕಳು ಮತ್ತು ಗರ್ಭಿಣಿಯರ ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಕಳಪೆ ಗುಣಮಟ್ಟದ ಮೊಟ್ಟೆ, ಸತ್ವ ಇಲ್ಲದ ಅಕ್ಕಿಯನ್ನು ತಿಂದರೆ ಮಕ್ಕಳ ಆರೋಗ್ಯ ಹದಗೆಡುವುದಂತು ನಿಶ್ಚಿತ. ಕಳಪೆ ಆಹಾರ ಸಾಮಗ್ರಿ ಪೂರೈಸುವ ಮತ್ತು ಬೇಜವಾಬ್ದಾರಿತನ ತೋರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಎಐಟಿಸಿ ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.