ರಟ್ಟೀಹಳ್ಳಿ: ರಾಜ್ಯ ಸರ್ಕಾರ ಮದಗ ಮಾಸೂರು ಎಡದಂಡೆ ಬಲದಂಡೆ ಕಾಲುವೆ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗೆ ₹ 52.20 ಕೋಟಿ ಮಂಜೂರಾತಿ ನೀಡಿರುವುದು ಸ್ವಾಗತಾರ್ಹ. ಶಾಸಕ ಯು.ಬಿ. ಬಣಕಾರ ಪ್ರಯತ್ನದ ಫಲವಾಗಿ ಯೋಜನೆಗೆ ಹಣ ಮಂಜೂರಾಗಿರುವುದು ಸಂತಸ ತಂದಿದೆ. ಆದರೆ ಮಂಜೂರಾತಿ ಹಣವನ್ನು ಕೇವಲ ಎಡದಂಡೆ ಬಲದಂಡೆ ಕಾಲುವೆ ಆಧುನೀಕರಣಗೊಳಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮದಗ ಮಾಸೂರು ಕೆರೆ ವೀಸ್ತ್ರೀರ್ಣದ ಅನ್ವಯ ಒತ್ತುವರಿ ತೆರವುಗೊಳಿಸಿ ಹದ್ದು ಬಂದೋಬಸ್ತ್ ಗೊಳಿಸುವುದು, ಸಂಪೂರ್ಣವಾಗಿ ಹೂಳೆತ್ತಿ ಕೆರೆಯಲ್ಲಿ ನೀರು ಸಂಗ್ರಹವಾಗುವಂತೆ ಮಾಡುವುದು, ಕೆರೆಯ ಕೋಡಿಯನ್ನು ಎತ್ತರಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಿದಲ್ಲಿ ಮದಗದ ಕೆರೆಯಲ್ಲಿ ನೀರು ಸಂಗ್ರಹಗೊಂಡು ವರ್ಷಪೂರ್ತಿ ಕಾಲುವೆಗಳ ಮೂಲಕ ನೀರು ಹರಿದು ಕಾಲುವೆ ದಂಡೆಯ ಮೇಲಿರುವ ನೀರಾವರಿ ಜಮೀನುಗಳಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಕಾಲುವೆ ಆಧುನೀಕರಣ ಮಾತ್ರ ಕೈಗೊಂಡಲ್ಲಿ ಸರ್ಕಾರದ ಹಣ ಪೋಲಾಗುವುದರಲ್ಲಿ ಸಂಶಯವಿಲ್ಲ. ತಾಲ್ಲೂಕಿನ ಕೆಲವೊಂದು ಗ್ರಾಮಗಳ ಜಮೀನುಗಳಿಗೆ ತುಂಗಾ ಮೇಲ್ದಂಡೆ ಮುಖ್ಯಕಾಲುವೆ ನೀರು ತಾಲ್ಲೂಕಿನ ಕೆಲವೊಂದು ಗ್ರಾಮಗಳಿಗೆ ಮದಗ ಕೆರೆಯ ನೀರು ಹಾಗೂ ಕುಮದ್ವತಿ ನದಿ ನೀರು ಪೂರೈಕೆಗೊಂಡು ಈ ಭಾಗದ ರೈತರಿಗೆ ಶಾಶ್ವತವಾಗಿ ನೀರಾವರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ ನಾಗಣ್ಣನವರ, ಮುಖಂಡರಾದ ಶಂಭಣ್ಣ ಗೂಳಪ್ಪನವರ, ಸುಶೀಲ ನಾಡಗೇರ. ಮಂಜು ತಳವಾರ ರವಿ ಹದಡಿ, ಬಸವರಾಜ ಆಡಿನವರ, ಸಿದ್ದು ಸಾವಕ್ಕಳವರ, ಸಿದ್ದು ಹಲಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.