ADVERTISEMENT

ಹಾವೇರಿ | ಮದಗ ಮಾಸೂರು ಕೆರೆ ಕಾಲುವೆ ಅಭಿವೃದ್ಧಿಗೆ ಅಸ್ತು

ರೈತರ ಬಹುದಿನಗಳ ಹೋರಾಟಕ್ಕೆ ಜಯ: ₹ 52.20 ಕೋಟಿ ಕಾಮಗಾರಿಗೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:56 IST
Last Updated 25 ಜುಲೈ 2025, 2:56 IST
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮಗದ ಮಾಸೂರು ಕೆರೆ ಕಾಲುವೆಗಳ ಅಭಿವೃದ್ಧಿಗೆ ಸರ್ಕಾರ ₹ 52.20 ಕೋಟಿ ನೀಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ಮಾಡಿದರು
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮಗದ ಮಾಸೂರು ಕೆರೆ ಕಾಲುವೆಗಳ ಅಭಿವೃದ್ಧಿಗೆ ಸರ್ಕಾರ ₹ 52.20 ಕೋಟಿ ನೀಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ಮಾಡಿದರು   

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಯ ಮುಖ್ಯ ಕಾಲುವೆಗಳ ಅಭಿವೃದ್ಧಿಗಾಗಿ ರೈತರು ನಡೆಸುತ್ತಿದ್ದ ಹಲವು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಕಾಲುವೆಗಳ ಆಧುನೀಕರಣ ಕಾಮಗಾರಿಗೆ ₹ 52.20 ಕೋಟಿ ನೀಡಲು ಸರ್ಕಾರ ಸಮ್ಮತಿ ಸೂಚಿಸಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮದಗ ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ಕಾಲುವೆಗಳ ಆಧುನೀಕರಣಕ್ಕಾಗಿ ₹ 52.20 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

1862ರಲ್ಲಿ ನಿರ್ಮಿಸಿದ್ದ ಎರಡೂ ಕಾಲುವೆಗಳು ಹಾಳಾಗಿದ್ದವು. ಎಲ್ಲೆಂದರಲ್ಲಿ ಗಿಡಗಂಟಿ ಬೆಳೆದಿತ್ತು. ಹೂಳು ತುಂಬಿಕೊಂಡು ನೀರು ಪೋಲಾಗುತ್ತಿತ್ತು. ಅಂತರ್ಜಲ ಮಟ್ಟವೂ ಕುಸಿಯುತ್ತಿತ್ತು. ಇದರಿಂದ ಸಮಸ್ಯೆ ಅನುಭವಿಸುತ್ತಿದ್ದ ಸ್ಥಳೀಯರು ಹಾಗೂ ರೈತರು, ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ರಚಿಸಿಕೊಂಡಿದ್ದರು. ಅದರ ಮೂಲಕ ಕೆರೆ ಹಾಗೂ ಕಾಲುವೆಗಳ ಅಭಿವೃದ್ಧಿಗಾಗಿ ಹೋರಾಟ ಆರಂಭಿಸಿದ್ದರು. ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ, ಕಾಲುವೆಗಳ ಆಧುನೀಕರಣಕ್ಕೆ ಅಸ್ತು ಎಂದಿದೆ.

ADVERTISEMENT

‘ಮಾಸೂರು ಗ್ರಾಮದ ಬಳಿ ಕುಮದ್ವತಿ ನದಿಗೆ ಅಡ್ಡವಾಗಿ ಮದಗ - ಮಾಸೂರು ಕೆರೆಯಿದೆ. 14ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಆಣೆಕಟ್ಟೆ ನಿರ್ಮಿಸಲಾಗಿದೆ. ಈ ಕೆರೆಯಲ್ಲಿ 0.056 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಇದರಿಂದ 715 ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಅವಕಾಶಗಳಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

‘ಕೆರೆಯ ಎಡದಂಡೆ ಕಾಲುವೆ 11 ಕಿ.ಮೀ. ಹಾಗೂ ಬಲದಂಡೆ ಕಾಲುವೆಯು 13 ಕಿ.ಮೀ. ಉದ್ದವಿದೆ. ಎರಡೂ ಕಾಲುವೆಗಳಿಂದ ಕ್ರಮವಾಗಿ 243 ಹೆಕ್ಟೇರ್ ಹಾಗೂ 427 ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಎರಡೂ ಕಾಲುವೆಗಳನ್ನು 1862ರಲ್ಲಿ ನಿರ್ಮಿಸಲಾಗಿದ್ದು, ಈಗ ಬಹುತೇಕ ಕಡೆ ಹಾಳಾಗಿದೆ. ಇದರಿಂದ ನೀರು ಪೋಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕಾಲುವೆ ಅಭಿವೃದ್ಧಿ ಮಾಡಬೇಕೆಂದು ರೈತರು ಹಾಗೂ ಶಾಸಕ ಯು.ಬಿ. ಬಣಕಾರ ಒತ್ತಾಯಿಸುತ್ತಿದ್ದರು’ ಎಂದು ಹೇಳಿದರು.

‘ರೈತರ ಬೇಡಿಕೆಯಂತೆ ಎರಡೂ ಕಾಲುವೆಗಳ ಆಧುನೀಕರಣ ಮತ್ತು ದುರಸ್ತಿ ನಡೆಯಲಿದೆ. ಹೆಚ್ಚುವರಿ ಸಿ.ಡಿ. ಕಾಮಗಾರಿ, ತೂಗುಕಾಲುವೆ, ರಸ್ತೆ ಸೇತುವೆಗಳ ದುರಸ್ತಿ ಹಾಗೂ ಪುನರ್‌ ನಿರ್ಮಾಣ, ಕ್ಯಾಟಲ್‌ ರ‍್ಯಾಂಪ್, ಕೆನಾಲ್‌ ಕ್ರಾಸಿಂಗ್‌ ಕಾಮಗಾರಿಗಳು ನಡೆಯಲಿವೆ’ ಎಂದರು.

ಈ ಕಾಮಗಾರಿಯಿಂದ ಮದಗ ಮಾಸೂರು ಕೆರೆ ಪ್ರೇಕ್ಷಣೀಯ ಸ್ಥಳವೂ ಆಗಲಿದೆ. ತಾಲ್ಲೂಕಿನ ತಿಪ್ಪಾಯಿಕೊಪ್ಪ, ಯತ್ನಹಳ್ಳಿ, ರಾಮತೀರ್ಥ, ಖಂಡೇಬಾಗೂರು ಮಾಸೂರು, ಹಿರೇಮೊರಬ, ಚಿಕ್ಕಮೊರಬ, ಬೆಳ್ಳೂರು, ಬನ್ನಿಹಟ್ಟಿ, ಕೋಡಮಗ್ಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲಮಟ್ಟವೂ ಹೆಚ್ಚಳವಾಗುವುದಾಗಿ ರೈತರು ಹೇಳಿದರು.

ಮದಗ ಮಾಸೂರು ಕೆರೆ ತಾಲ್ಲೂಕಿನ ಜನತೆಯ ಜೀವನಾಡಿ. ಕಾಲುವೆ ಅಭಿವೃದ್ಧಿಪಡಿಸಿದರೆ ರೈತರಿಗೆ ನೀರು ಲಭ್ಯವಾಗಲಿದ್ದು ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ
ನಿಂಗಪ್ಪ ಚಳಗೇರಿ ಅಧ್ಯಕ್ಷ ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.