ADVERTISEMENT

ಗುರು ಇಲ್ಲದೇ ಅರಿವು ಅಸಾಧ್ಯ: ಮಹಾಂತ ಶ್ರೀ

ಗುರುವಂದನಾ-ಸ್ನೇಹ ಸಂಗಮ, ರಜತ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:04 IST
Last Updated 4 ಜೂನ್ 2025, 15:04 IST
ಸವಣೂರು ಪಟ್ಟಣದ ಶ್ರೀ ಲಲಾಟೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ-ಸ್ನೇಹ ಸಂಗಮ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು
ಸವಣೂರು ಪಟ್ಟಣದ ಶ್ರೀ ಲಲಾಟೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ-ಸ್ನೇಹ ಸಂಗಮ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು   

ಸವಣೂರು: ವ್ಯಕ್ತಿ ಶಕ್ತಿಯಾಗಿ ಬೆಳೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸತತ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳ ಸಮಗ್ರ ಅಭ್ಯುದಯಕ್ಕೆ ಪರಿವರ್ತನಕಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ ಎಂದು ಕಲ್ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಲಲಾಟೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1993 ರಿಂದ 2000 ವರೆಗೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ-ಸ್ನೇಹ ಸಂಗಮ ಸಂಭ್ರಮ ಸಮಾರಂಭ ಹಾಗೂ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಪ್ರತಿಯೊಬ್ಬ ಮನುಷ್ಯನ ಬದುಕಿನ ಶ್ರೇಯಸ್ಸಿಗೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಗುರು ಇಲ್ಲದೇ ಅರಿವು ಅಸಾಧ್ಯ. ಗುರು ಬಾಳ ಬಾಂದಳಕ್ಕೆ ಬೆಳಕು ನೀಡುವ ಚಿತ್ಸೂರ್ಯ. ಅವರ ತ್ಯಾಗ, ಔದಾರ್ಯ, ವಾತ್ಸಲ್ಯ ಮತ್ತು ಪರಿಪಕ್ವತೆಯ ಬೋಧೆ ಸಾಮಾನ್ಯನನ್ನೂ ಅಸಮಾನ್ಯನನ್ನಾಗಿ ಮಾಡಬಲ್ಲದು’ ಎಂದರು.

ADVERTISEMENT

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಾಗರಾಜ ಬಂಡಿವಡ್ಡರ ಮಾತನಾಡಿ, ಶಿಕ್ಷಣ ಕೇಂದ್ರಗಳು ಮಾನವ ವಿಕಾಸಕ್ಕೆ ಬೇಕಾದ ಬೆಳಕು ನೀಡುವಲ್ಲಿ ಮಾಡಿಕೊಂಡು ಬಂದಿರುವ ಕಾರ್ಯ ಅನನ್ಯವಾದುದು’ ಎಂದರು.

ಶಾಲೆಯ ಮುಖ್ಯಗುರು ಸಿ.ಜಿ.ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳು ಶಾಲಾ ಕಾರ್ಯಾಲಯಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಪೀಠೋಪಕರಣಗಳನ್ನು ಕೊಡುಗೆ ನೀಡಿದರು. ಜಯಮ್ಮ ಗಾಣಿಗೇರ ಪ್ರಾಸ್ತಾವಿಕ ಮಾತನಾಡಿದರು.

ಶಾಲೆಯ ನಿವೃತ್ತ ಶಿಕ್ಷಕರಾದ ವಿ.ವಿ.ಗುಡಗೇರಿ, ಆರ್.ಎಸ್.ಪಾಟೀಲ, ಎಸ್.ಎನ್.ತಾಯಮ್ಮನವರ, ಎಲ್.ಎಂ.ದೇಸಾಯಿಮಠ, ಎಸ್.ಬಿ.ಗಂಗಣ್ಣವರ, ಬಿ.ಎಂ.ಆರಾಧ್ಯಮಠ, ಎಚ್.ಎಫ್.ದ್ಯಾವನಗೌಡ್ರ, ಗೀತಾ ಕಲಾಲ, ಶಿವಲೀಲಾ ಅಂಕಲಕೋಟಿ, ಸುರೇಖಾ ನೆರಲೀಕರ, ಅಂಜನಾ ಬುತ್ತಿ, ಶಂಕ್ರಪ್ಪ ಮುರಿಗೆಣ್ಣನವರ, ಸಿಪಾಯಿಗಳಾದ ಗಣೇಶ ಸಂಕ್ಲಿಪುರ, ಮಲ್ಲಪ್ಪ ಪೂಜಾರ ಹಾಗೂ ಅಗಲಿದ ಶಿಕ್ಷಕರ ಪರಿವಾರಕ್ಕೆ ಮತ್ತು ಸ್ನೇಹಿತರ ಪಾಲಕರಿಗೆ ಗೌರವಿಸಲಾಯಿತು. ಶಾಲೆಯ ಹಳೆಯ  ವಿದ್ಯಾರ್ಥಿಗಳಾದ ಕವಿತಾ ಹಿರೇಮಠ, ವೀರಣ್ಣ ಚರಂತಿಮಠ, ಡಾ.ಗುರುಪಾದಯ್ಯ ಸಾಲಿಮಠ, ಶಿಲ್ಪಾ ಅತ್ತಿಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.