ADVERTISEMENT

ವಿಸ್ತರಣೆಯಾಗದ ಬ್ಯಾಡಗಿ ಮುಖ್ಯರಸ್ತೆ: ಜನ ಹೈರಾಣ

ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ: ರಸ್ತೆ ವಿಸ್ತರಣೆಗೆ 12 ವರ್ಷಗಳಿಂದ ನಿರಂತರ ಹೋರಾಟ

ಪ್ರಮೀಳಾ ಹುನಗುಂದ
Published 2 ಜನವರಿ 2023, 5:02 IST
Last Updated 2 ಜನವರಿ 2023, 5:02 IST
ಬ್ಯಾಡಗಿ ಕಿರಿದಾದ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆಯ ದೃಶ್ಯ 
ಬ್ಯಾಡಗಿ ಕಿರಿದಾದ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆಯ ದೃಶ್ಯ    

ಬ್ಯಾಡಗಿ: ಒಣ ಮೆಣಸಿನಕಾಯಿ ವ್ಯಾಪಾರಕ್ಕೆ ವಿಶ್ವ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬ್ಯಾಡಗಿ ದೇಶ ವಿದೇಶಗಳಲ್ಲಿ ಹೆಸರು ಗಳಿಸಿದೆ. ಆದರೆ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಚರಂಡಿಗಳಿಲ್ಲದೆ ರಸ್ತೆಗೆ ಹರಿಯುವ ಶೌಚಾಲಯದ ನೀರು, ಸದಾ ದೂಳು, ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳು, ಸಂಚಾರ ಸಮಸ್ಯೆಯ ಕಿರಿಕಿರಿ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಪಟ್ಟಣದ ಜನ ರೋಸಿ ಹೋಗಿದ್ದಾರೆ.

ಪಟ್ಟಣದ ಮೂಲಕ ಹಾದು ಹೋಗಿರುವ ಸೊರಬ– ಗಜೇಂದ್ರಗಡ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದ ಬಳಿಕ ರಸ್ತೆ ವಿಸ್ತರಣೆಯ ಹೋರಾಟ ಇನ್ನೂ ತೀವ್ರಗೊಂಡಿತು. ರಸ್ತೆ ವಿಸ್ತರಣೆ ಹೋರಾಟ ಸಮಿತಿ ರಚಿಸಿಕೊಂಡು ಸುಮಾರು 12 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಮೂವರು ಶಾಸಕರು ಅಧಿಕಾರ ಪೂರ್ಣಗೊಳಿಸಿದರೂ ರಸ್ತೆ ವಿಸ್ತರಣೆ ಅಂತಿಮ ಹಂತಕ್ಕೆ ಬರಲೇ ಇಲ್ಲ.

ADVERTISEMENT

ರಸ್ತೆ ವ್ಯಾಪ್ತಿಯ 0.75 ಕಿ.ಮೀ ಹೊರತುಪಟಿಸಿ ಅಗಸನಹಳ್ಳಿಯಿಂದ ಎಸ್‌ಜೆಎಂ ಕರ್ನಾಟಕ ಪಬ್ಲಿಕ್ ಶಾಲೆಯವರೆಗೆ ಮತ್ತು ಹೆಸ್ಕಾಂ ಗ್ರಿಡ್‌ನಿಂದ ಕೆಸಿಸಿ ಬ್ಯಾಂಕ್ವವರೆಗೆ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ.

ಪಾದಚಾರಿಗಳಿಗೆ ಸಂಕಷ್ಟ:

ಮುಖ್ಯರಸ್ತೆಯಲ್ಲಿ ಪಾದಚಾರಿಗಳಿಗೆ ಕಂಟಕ ತಪ್ಪಿದ್ದಲ್ಲ. ಮಹಿಳೆಯರಂತೂ ಮುಖ್ಯರಸ್ತೆಯ ಮೂಲಕ ಹಾದು ಹೋಗುವಂತಿಲ್ಲ. ಬಟ್ಟೆಗಳಿಗೆ ಚರಂಡಿ ನೀರು ರಾಚುವ ಆತಂಕ. ಮಳೆ ಬಂದರೆ ರಸ್ತೆಯ ತುಂಬೆಲ್ಲ ಚರಂಡಿ ನೀರು ಹರಿದು ಕಾಲಿಡಲೂ ಸಾಧ್ಯವಾಗದೆ ಗಂಟೆಗಟ್ಟಲೆ ಸ್ಥಳಬಿಟ್ಟು ಕದಲದ ಪರಿಸ್ಥಿತಿ ಎದುರಿಸುವಂತಾಗಿದೆ.

ಮುಖ್ಯ ರಸ್ತೆ ವಿಸ್ತರಣೆಗೆ ಹಲವಾರು ಬಾರಿ ಪ್ರತಿಭಟನೆ ನಡೆದಿದ್ದರೂ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಯ ಎರಡೂ ಬದಿಗೂ ಚರಂಡಿ ನಿರ್ಮಿಸಿ, ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ ಮನವಿ ಮಾಡಿಕೊಂಡಿದ್ದಾರೆ.

ಮುಚ್ಚಿಹೋದ ಚರಂಡಿ:

2016ರಲ್ಲಿ ಅಂದಿನ ತಹಶೀಲ್ದಾರ್‌ ಶಿವಶಂಕರ ನಾಯಕ್ ಮುಖ್ಯರಸ್ತೆಯಲ್ಲಿರುವ ಚರಂಡಿಗಳನ್ನು ತೆರವುಗೊಳಿಸಿದ ಬಳಿಕ ಅವೆಲ್ಲ ಮುಚ್ಚಿಹೋಗಿದ್ದು, ಶೌಚಾಲಯದ ನೀರು ಹರಿಯುವುದು ದುಸ್ತರವಾಗಿದೆ. ಆ ಬಳಿಕ ಚರಂಡಿ ನಿರ್ಮಾಣವಾಗಿಲ್ಲ. ರಸ್ತೆ ದುರಸ್ತಿಯಂತೂ ಕಾಟಾಚಾರಕ್ಕೆ ಎನ್ನುವಂತಾಗಿದೆ. ಮುಖ್ಯ ರಸ್ತೆಯ ನಿವಾಸಿಗಳ ಪರಿಸ್ಥಿತಿ ಹೇಳತೀರದು. ಇನ್ನಾದರೂ ರಸ್ತೆ ದುರಸ್ತಿಗೆ ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಕುರಿತು ಸಾಕಷ್ಟು ಹೋರಾಟದ ಸಂದರ್ಭದಲ್ಲಿ ಕೆಲ ಮುಖಂಡರು ಮುಖ್ಯ ರಸ್ತೆಗೆ ಅಗತ್ಯವಿರುವ ತಮ್ಮ ಆಸ್ತಿಯನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುವ ಭರವಸೆ ನೀಡಿದ್ದರು. ಆದರೆ ಅವೆಲ್ಲ ಕೋರ್ಟ್‌ ನೀಡುವ ತೀರ್ಪಿನ ಮೇಲೆ ಅವಲಂಬಿಸಿದ್ದವು. ಮತ್ತೊಮ್ಮೆ ಕಾನೂನು ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಜನರಿಗೆ ಆಗುವ ತೊಂದರೆಯನ್ನು ತಾತ್ಕಾಲಿಕವಾಗಿ ಪರಿಹರಿಸುವಂತೆ ಜನರ ಒತ್ತಾಯವಾಗಿದೆ.

ಬ್ಯಾಡಗಿ ಪಟ್ಟಣದ ಮೂಲಕ ಹಾದು ಹೋಗಿರುವ ಸೊರಬ– ಗಜೇಂದ್ರಗಡ ರಾಜ್ಯ ಹೆದ್ದಾರಿ 136ರ ಪೈಕಿ 137.05ಕಿ.ಮೀ ರಿಂದ 137.80 ಕಿ.ಮೀವರೆಗೆ ಅಗಲೀಕರಣ ಕುರಿತು ಹೈಕೋರ್ಟ್‌ ಅಕ್ಟೋಬರ್ 19 ರಂದು ಅಂತಿಮ ಆದೇಶ ನೀಡಿದೆ. ಭೂಸ್ವಾಧೀನ ಕಾಯ್ದೆ (ತಿದ್ದುಪಡಿ) 2013ನೇದ್ದರ ಅಡಿಯಲ್ಲಿ ಸಾಮಾಜಿಕ ತತ್ಪರಿಣಾಮ ಮೌಲ್ಯಮಾಪನ (ಎಸ್ಐಎ) ರಿಯಾಯತಿಗೊಳಿಸಿದ್ದರಿಂದ ಹಿಡಿದು ಪ್ರಾಥಮಿಕ ಅಧಿಸೂಚನೆ, ಪುನರ್ ವಸತಿ, ಪುನರ್ ವ್ಯವಸ್ಥೆ ಕರ್ನಾಟಕ ನಿಯಮಗಳ ಅಧಿನಿಯಮ ಪ್ರಕಾರ ಇರುವ ಅಧಿನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಹೀಗಾಗಿ ಕೋರ್ಟ್‌ ಭೂಸ್ವಾಧೀನ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಿದೆ. ಕೋರ್ಟ್‌ ನಿದರ್ೆಶನದಂತೆ ರಸ್ತೆ, ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಪುರಸಭೆ ಮೂರು ತಿಂಗಳೊಳಗೆ ಕಲ್ಪಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಮತ್ತೆ ಕೋರ್ಟ್‌ ಮೆಟ್ಟಿಲೇರಬೇಕಾಗುತ್ತದೆ ಇಲ್ಲಿನ ನಿವಾಸಿ ಶಿದ್ಧಲಿಂಗಪ್ಪ ಶೆಟ್ಟರ ಹೇಳುತ್ತಾರೆ.

ಹೈಕೋರ್ಟ್‌ ತೀರ್ಪು ಪ್ರಕಟ

ಮುಖ್ಯ ರಸ್ತೆಯಲ್ಲಿರುವ ಮಳಿಗೆಗಳು ಸ್ವಂತ ಆಸ್ತಿಯಾಗಿರುವುದರಿಂದ ವಿಸ್ತರಣೆಗೆ ಕಾನೂನು ತೊಡಕು ಉಂಟಾಗಿದ್ದು, ಹೀಗಾಗಿ ನೂರಾರು ಆಸ್ತಿ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಕಳೆದ ಅ.20ರಂದು ತೀರ್ಪು ಪ್ರಕಟಗೊಂಡಿದೆ. ಭೂಸ್ವಾಧೀನ ಕಾಯ್ದೆ (ತಿದ್ದುಪಡಿ) 2013ನೇದ್ದರ ಅಡಿಯಲ್ಲಿ ಅಧಿಸೂಚನೆ ಹೊರಡಿಸಿರುವುದು ಸೇರಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಿದ್ದು, ನಿಯಮದಂತೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮೆಣಸಿನಕಾಯಿ ವ್ಯಾಪಾರ ಈಗ ವರ್ಷವಿಡೀ ನಡೆಯುತ್ತಿದೆ. ಬಳ್ಳಾರಿ, ರಾಯಚೂರು, ಕಲಬುರ್ಗಿ, ಆಂಧ್ರದ ಗಡಿಭಾಗದ ಜಿಲ್ಲೆಗಳಿಂದ ಮೆಣಸಿನಕಾಯಿ ಚೀಲಗಳನ್ನು ಹೇರಿಕೊಂಡು ಭಾರಿ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತವೆ. ಆದರೆ ಹದಗೆಟ್ಟಿರುವ ರಸ್ತೆಯಿಂದ ಪರದಾಡುವಂತಾಗಿದೆ.

ಮತ್ತೆ ಭೂಸ್ವಾಧೀನ ಪ್ರಕ್ರಿಯೆಗೆ ಮನವಿ

‘ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಭೂಸ್ವಾಧೀನ ಸೇರಿದಂತೆ ಮುಖ್ಯ ರಸ್ತೆ ಅಭಿವೃದ್ಧಿಗೆ ಒಟ್ಟಾರೆ ₹15.60 ಕೋಟಿ ತೆಗೆದಿಡಲಾಗಿದೆ. ಈ ಪೈಕಿ ₹8.84 ಕೋಟಿ ಹಣವನ್ನು ಉಪವಿಭಾಗಾಧಿಕಾರಿಗಳ ಖಾತೆಗೆ ವರ್ಗಾಯಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಇನ್ನೊಮ್ಮೆ ಆರಂಭಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಉಮೇಶ ನಾಯಕ್ ಮಾಹಿತಿ ನೀಡಿದರು.

***

ರೈಲ್ವೆ ನಿಲ್ದಾಣದಿಂದ ನೇರವಾಗಿ ಮಾರುಕಟ್ಟೆ ಪ್ರವೇಶಿಸುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಮುಖ್ಯ ರಸ್ತೆ ಅಭಿವೃದ್ಧಿಪಡಿಸಬೇಕು
- ಮುರಿಗೆಪ್ಪ ಶೆಟ್ಟರ, ಪುರಸಭೆ ಮಾಜಿ ಅಧ್ಯಕ್ಷ

***

ಲೋಕೋಪಯೋಗಿ ಇಲಾಖೆ ಕಟ್ಟಡಗಳ ಸ್ಟೆಬಿಲಿಟಿ ಕುರಿತು ವರದಿ ನೀಡಲಿದ್ದು, ಕಾನೂನಿನ ಚೌಕಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಕೊಳ್ಳಲು ಸಿದ್ಧತೆ ನಡೆದಿದೆ
ವಿರೂಪಾಕ್ಪಪ್ಪ ಬಳ್ಳಾರಿ, ಶಾಸಕ

***

12 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗಿದೆ. ನ್ಯಾಯಾಲಯದ ನಿರ್ದೆಶನದಂತೆ ಮತ್ತೊಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು
ಸುರೇಶ ಛಲವಾದಿ, ಮುಖ್ಯರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.