ADVERTISEMENT

ರಾಣೆಬೆನ್ನೂರು | ಮೆಕ್ಕೆಜೋಳ ಹಾಳು: ರೈತರ ಕಣ್ಣೀರು

ಸಂತೋಷ ಜಿಗಳಿಕೊಪ್ಪ
Published 26 ಜೂನ್ 2025, 5:13 IST
Last Updated 26 ಜೂನ್ 2025, 5:13 IST
ನೀರಿನಿಂದ ತೊಯ್ದು ಮೊಳಕೆಯೊಡೆದ ಮೆಕ್ಕೆಜೋಳವನ್ನು ರೈತರು ತೋರಿಸಿದರು
ನೀರಿನಿಂದ ತೊಯ್ದು ಮೊಳಕೆಯೊಡೆದ ಮೆಕ್ಕೆಜೋಳವನ್ನು ರೈತರು ತೋರಿಸಿದರು   

ರಾಣೆಬೆನ್ನೂರು (ಹಾವೇರಿ): ಬಿಡುವು ನೀಡುತ್ತ ಸುರಿಯುತ್ತಿರುವ ಮಳೆ. ನೀರಿನಿಂದ ತೊಯ್ದ ಮೊಳಕೆಯೊಡೆದ ಮೆಕ್ಕೆಜೋಳ. ಹಾಳಾದ ಬೆಳೆಯ ಎದುರು ರೈತರ ಕಣ್ಣೀರು. ಹಿಂಗಾರಿನ ಬೆಳೆ ಖರೀದಿಸಲು ವ್ಯಾಪಾರಿಗಳ ಹಿಂದೇಟು. ಕೇಳುವವರಿಲ್ಲ ಅನ್ನದಾತನ ಗೋಳು...

ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ (ಮೆಗಾ ಮಾರುಕಟ್ಟೆ) ಮೆಕ್ಕೆಜೋಳ ಒಣಗಲು ಹಾಕಿರುವ ರೈತರು, ಮಳೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದಾಗಿ ಸ್ಥಳದಲ್ಲಿಯೇ ಮೆಕ್ಕೆಜೋಳ ಮೊಳಕೆಯೊಡೆದು ಗಿಡವಾಗುತ್ತಿದ್ದು, ಮೆಕ್ಕೆಜೋಳ ಮಾರಾಟ ಮಾಡುವುದು ಹೇಗೆ? ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರೈತರು ಬೆಳೆದ ಮೆಕ್ಕೆಜೋಳ (ಗೋವಿನ ಜೋಳ) ಮಾರಾಟಕ್ಕೆ ರಾಣೆಬೆನ್ನೂರು ಪ್ರಸಿದ್ಧವಾಗಿದೆ. ಹಾವೇರಿ, ದಾವಣಗೇರಿ, ಶಿವಮೊಗ್ಗ, ಗದಗ, ಧಾರವಾಡ ಸೇರಿದಂತೆ ಹಲವು ಜಿಲ್ಲೆಯ ಜನರು ರಾಣೆಬೆನ್ನೂರಿಗೆ ಬಂದು ಮೆಕ್ಕೆಜೋಳ ಮಾರುತ್ತಿದ್ದಾರೆ. ಹಸಿಕಾಳು ಎಂಬ ಕಾರಣಕ್ಕೆ ಕಡಿಮೆ ಬೆಲೆ ನೀಡುವುದಾಗಿ ಹೇಳುತ್ತಿರುವ ವ್ಯಾಪಾರಸ್ಥರು, ಕಾಳು ಒಣಗಿಸಿ ನೀಡಿದರೆ ಹೆಚ್ಚು ದರವೆಂದು ತಿಳಿಸುತ್ತಿದ್ದಾರೆ.

ADVERTISEMENT

ಹೆಚ್ಚಿನ ದರ ಸಿಗಬಹುದೆಂಬ ಆಸೆಯಿಂದ ರೈತರು, ರಸ್ತೆಗಳು ಹಾಗೂ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಒಣಗಿಸಲು ಹಾಕುತ್ತಿದ್ದಾರೆ. ಆದರೆ, ಮುಂಗಾರು ಆರಂಭವಾಗಿರುವುದರಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಒಣಗಲು ಹಾಕಿರುವ ಮೆಕ್ಕೆಜೋಳಕ್ಕೂ ನೀರು ನುಗ್ಗುತ್ತಿದೆ. ಇದನ್ನು ತಡೆಯಲಾಗದೇ, ತೊಯ್ದ ಮೆಕ್ಕೆಜೋಳದ ಎದುರು ರೈತರು ಕಣ್ಣೀರಿಡುತ್ತಿದ್ದಾರೆ.

ಶಿವಮೊಗ್ಗ ರೈತರು ಕಂಗಾಲು:

ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಹಲವು ರೈತರು ಮೆಕ್ಕೆಜೋಳ ಬೆಳೆದಿದ್ದು, ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಇರುವುದರಿಂದ, ಮೆಕ್ಕೆಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ಒಣಗಿಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಹ ಶಿವಮೊಗ್ಗ ಜಿಲ್ಲೆಯಲ್ಲಿಲ್ಲ. ಹೀಗಾಗಿ ಅಲ್ಲಿಯ ರೈತರು, ರಾಣೆಬೆನ್ನೂರಿಗೆ ಮೆಕ್ಕೆಜೋಳ ತಂದಿದ್ದಾರೆ. ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದಾರೆ.

ಕೆಲದಿನಗಳಿಂದ ಮಳೆ ಸುರಿಯುತ್ತಿರುವುದರಿಂದ, ರೈತರು ಒಣಗಲು ಹಾಕಿರುವ ಮೆಕ್ಕೆಜೋಳ ನೀರು ಪಾಲಾಗಿದೆ. ಎಪಿಎಂಸಿ ಆವರಣದಲ್ಲಿ ಬೆಳೆ ಒಣಗಿಸಲು ಸೂಕ್ತ ವ್ಯವಸ್ಥೆ ಇಲ್ಲದಿದ್ದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

‘ಮುಂಗಾರಿನಲ್ಲಿ ಭತ್ತ ಬೆಳೆದಿದ್ದೆವು. ಹಿಂಗಾರಿನಲ್ಲಿ ಎರಡು ಎಕರೆ ಜಮೀನಿನಲ್ಲಿ 90 ಕ್ವಿಂಟಲ್ ಮೆಕ್ಕೆಜೋಳ ಬೆಳೆದಿದ್ದೇವೆ. ಅದನ್ನು ರಾಣೆಬೆನ್ನೂರಿಗೆ ಬಂದು ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದೆವು. ಆದರೆ, ನೀರಿನಿಂದ ಬೆಳೆ ಸಂಪೂರ್ಣ ತೊಯ್ದಿದೆ. ಇದನ್ನು ಖರೀದಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ಸೊರಬ ತಾಲ್ಲೂಕಿನ ಕಾನಳ್ಳಿ ಗ್ರಾಮದ ರೈತ ಈರಪ್ಪ ಅಳಲು ತೋಡಿಕೊಂಡರು.

‘ನಮ್ಮೂರಿನಲ್ಲಿ ಮೆಕ್ಕೆಜೋಳ ಒಣಗಿಸಲು ಜಾಗವಿಲ್ಲ. ಹೀಗಾಗಿ, ರಾಣೆಬೆನ್ನೂರಿಗೆ ಬಂದಿದ್ದೇವೆ. ನಮ್ಮ ಬೆಳೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದ್ದು, ಮನೆಯವರಿಗೆ ಮುಖ ತೋರಿಸಲು ಆಗದ ಸ್ಥಿತಿಗೆ ಬಂದಿದ್ದೇವೆ. ಸಾಲ ಮಾಡಿ ಬೆಳೆದ ಬೆಳೆಯೂ ಕೈ ಹಿಡಿದಿಲ್ಲ’ ಎಂದು ರೈತರ ವಿರೇಂದ್ರಕುಮಾರ
ಗೋಳಾಡಿದರು.

‘ತೊಯ್ದು ಕೊಳೆತಿರುವ ಮೆಕ್ಕೆಜೋಳಕ್ಕೆ ಬೆಲೆಯಿಲ್ಲವೆಂದು ವ್ಯಾಪಾರಿಗಳು ಖರೀದಿಸುತ್ತಿಲ್ಲ. ನಮಗೆ ತುಂಬಾ ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ನಮ್ಮಂಥ ರೈತರನ್ನು ಉಳಿಸಬೇಕು’ ಎಂದು ಆಗ್ರಹಿಸಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ (ಮೆಗಾ ಮಾರುಕಟ್ಟೆ) ನೀರಿನಿಂದ ತೊಯ್ದು ಮೊಳಕೆಯೊಡೆದ ಮೆಕ್ಕೆಜೋಳವನ್ನು ರೈತರು ತೋರಿಸಿದರು
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಾರುಕಟ್ಟೆ ಕಟ್ಟಿದರೆ ಸಾಲದು. ಮೂಲ ಸೌಕರ್ಯ ಕಲ್ಪಿಸಿ ಉಪಯೋಗಕ್ಕೆ ಬರುವಂತೆ ಮಾಡಬೇಕು
ಬಸವರಾಜ ರೈತ 
‘ಒಣಗಿಸುವ ಕಟ್ಟೆ ಅವೈಜ್ಞಾನಿಕ’
‘ರಾಣೆಬೆನ್ನೂರು ತಾಲ್ಲೂಕಿನ ಹೂಲಿಹಳ್ಳಿ–ಕೂನಬೇವು ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಬೆಳೆ ಒಣಗಿಸುವ ಕಟ್ಟೆಯಿದ್ದು ನೀರು ನಿಲ್ಲುತ್ತದೆ. ಅದು ಅವೈಜ್ಞಾನಿಕವಾಗಿದೆ. ರೈತರಿಗೆ ಸಮರ್ಪಕ ವ್ಯವಸ್ಥೆಯಿಲ್ಲ. ನಿರ್ವಹಣೆಯೂ ಶೂನ್ಯವಾಗಿದೆ’ ಎಂದು ರೈತರು ದೂರಿದರು. ‘ಮೆಕ್ಕೆಜೋಳ ನೀರಿನಿಂದ ತೊಯ್ದರೂ ಯಾರೊಬ್ಬರ ಅಧಿಕಾರಿಯೂ ತಿರುಗಿ ನೋಡಿಲ್ಲ. ರಾತ್ರಿ ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರಂತೂ ಇಲ್ಲವೇ ಇಲ್ಲ. ರೈತರು ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.