ADVERTISEMENT

ಶ್ರಾವಣದಲ್ಲೂ ತರಕಾರಿ ಸ್ಥಿರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 12:06 IST
Last Updated 30 ಆಗಸ್ಟ್ 2018, 12:06 IST
ಹಾವೇರಿಯ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ಚಿತ್ರಣ
ಹಾವೇರಿಯ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ಚಿತ್ರಣ   

ಹಾವೇರಿ: ಶ್ರಾವಣ ಮಾಸದಲ್ಲಿ ತರಕಾರಿ ಹಾಗೂ ದಿನಸಿ ಬೆಲೆಯೇರಿಕೆ ಸಹಜ. ಆದರೆ, ಶ್ರಾವಣ ಆರಂಭಗೊಂಡು ಎರಡು ವಾರ ಕಳೆದರೂ ಮಾರುಕಟ್ಟೆಯಲ್ಲಿ ದರ ಸ್ಥಿರವಾಗಿದೆ. ಉತ್ತಮ ಮಳೆಯ ಪರಿಣಾಮ ಮಾರುಕಟ್ಟೆಗೆ ತರಕಾರಿ ಆವಕವು ಹೆಚ್ಚಿದ್ದು, ಬೇಡಿಕೆಯಿದ್ದರೂ ದರ ಸ್ಥಿರವಾಗಿದೆ.

ಶ್ರಾವಣ ಮಾಸದಲ್ಲಿ ಗಣೇಶ ಚತುರ್ಥಿ ಮತ್ತಿತರ ಹಬ್ಬಗಳು ಬರುತ್ತವೆ. ಹಲವು ಮನೆಗಳಲ್ಲಿ ಉಪವಾಸ ಮತ್ತಿತರ ಆಚರಣೆಯಲ್ಲಿ ತೊಡಗುತ್ತಾರೆ. ಮಾಂಸಾಹಾರ ತ್ಯಜಿಸಿ, ಸಸ್ಯಾಹಾರದ ಮೊರೆ ಹೋಗುತ್ತಾರೆ. ಇದರಿಂದಾಗಿ ತರಕಾರಿ ಹಾಗೂ ದಿನಸಿ ಬೆಲೆ ಸಹಜ ಏರಿಕೆ ಕಾಣುತ್ತದೆ. ಆದರೆ, ಸತತ ಮೂರು ವರ್ಷಗಳ ಬರದ ಬಳಿಕ ಈ ಬಾರಿ ಉತ್ತಮ ಮಳೆಯಾಗಿದೆ. ಜಿಲ್ಲೆ ಸೇರಿದಂತೆ ವಿವಿಧೆಡೆ ತರಕಾರಿ ಬೆಳೆ ಉತ್ತಮವಾಗಿದೆ. ಹೀಗಾಗಿ ಈ ಬಾರಿ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ, ದರ ಏರಿಕೆ ಕಂಡಿಲ್ಲ ಎಂದು ವ್ಯಾಪಾರಿ ಅಲ್ಲಾಭಕ್ಷ್‌ ಕನವಳ್ಳಿ ತಿಳಿಸಿದರು.

‘ಆವಕ ಹೆಚ್ಚಿದ ಕಾರಣ ಈ ಬಾರಿ ಟೊಮೆಟೊ ದರವು ಕುಸಿತ ಕಂಡಿದೆ. ಹಾವೇರಿ ಹಾಗೂ ಸುತ್ತಲ ಪ್ರದೇಶದಲ್ಲಿ ಉತ್ತಮ ಬೆಳೆ ಬಂದ ಕಾರಣ ಬೆಲೆಯೇರಿಕೆ ಕಂಡಿದೆ’ ಎಂದು ರೈತ ನಿಂಗಪ್ಪ ತಿಳಿಸಿದರು.

ಕರಾವಳಿಯಲ್ಲಿ ಮೀನುಗಾರಿಕೆ ಆರಂಭಗೊಂಡ ಮಾರುಕಟ್ಟೆಗೆ ಮೀನಿನ ಆವಕ ಹೆಚ್ಚಿದ್ದು, ದರ ಕುಸಿತ ಕಂಡಿದೆ. ಅಲ್ಲದೇ, ಕೋಳಿ ಮಾಂಸದ ದರವೂ ಇಳಿಕೆ ಕಂಡಿದೆ ಎಂದು ವ್ಯಾಪಾರಿ ಅಸ್ಲಂ ಪಾಶಾ ತಿಳಿಸಿದರು.

ಹಾವೇರಿ ಮಾರುಕಟ್ಟೆಯಲ್ಲಿ ಕಳೆದ ವಾರ ಕೆ.ಜಿ.ಗೆ ₹15 ರ ಆಸುಪಾಸಿನಲ್ಲಿದ್ದ ಈರುಳ್ಳಿ ದರದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಟೊಮೆಟೊ ₹5ರಿಂದ ₹10 ಕ್ಕೆ, ಬೆಂಡೆಕಾಯಿ ₹20, ಬದನೆ ಕಾಯಿ (ಮುಳುಗಾಯಿ) ₹30, ಮೆಣಸಿಣಕಾಯಿ ₹20 ರಿಂದ ₹30, ಬೀಟ್ ರೂಟ್ ₹20, ಹಾಗಲಕಾಯಿ ₹30, ಆಲೂಗಡ್ಡೆ ₹25 ರಿಂದ 30 ಹಾಗೂ ಬಿನ್ಸ್‌ ₹20ರ ದರದಲ್ಲಿಯೇ ಇವೆ ಎಂದು ತರಕಾರಿ ವ್ಯಾಪಾರಿ ಸುರೇಶ ತೋಟದಎಲ್ಲಾಪುರ ತಿಳಿಸಿದರು.

ADVERTISEMENT

ಹೊರಜಿಲ್ಲೆಯಿಂದ ಹೀರೇಕಾಯಿ ( ₹30) ಹಾಗೂ ಸೌತೆಕಾಯಿ (₹40) ಆವಕವಾಗುತ್ತಿದ್ದು, ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.