ADVERTISEMENT

ಮೆಡಿಕಲ್‌ ಕಾಲೇಜು ಕಚೇರಿ ಉದ್ಘಾಟನೆ 14ರಂದು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:44 IST
Last Updated 10 ಫೆಬ್ರುವರಿ 2020, 12:44 IST
ನೆಹರು ಓಲೇಕಾರ
ನೆಹರು ಓಲೇಕಾರ   

ಹಾವೇರಿ: ‘ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುವ ಉದ್ದೇಶದಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದ್ದು, ಜಿಲ್ಲಾಸ್ಪತ್ರೆ ಆವರಣದ ಕೊಠಡಿಯೊಂದರಲ್ಲಿ ಫೆ.14ರಂದು ಬೆಳಿಗ್ಗೆ 11ಕ್ಕೆ ಕಚೇರಿ ಕಾರ್ಯಾರಂಭವಾಗಲಿದೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಹುದಿನದ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಡಾ.ಉದಯ ಮುಳಗುಂದ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ.

ಅಧಿವೇಶನದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದಿನಾಂಕ ಪಡೆದು ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಬಿ.ಸಿ. ಪಾಟೀಲ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದರು.

ADVERTISEMENT

ದೇವಗಿರಿ ಬಳಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಜಾಗ ಅಂತಿಮಗೊಂಡಿದೆ. ಆದರೆ, ನೆಲೋಗಲ್ಲ ಬಳಿ ಇರುವ ಜಾಗದಲ್ಲಿ ರಾಷ್ಟ್ರೀಯಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಾಗ ಅಗತ್ಯ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರದ ಯೋಜನೆಯಡಿ 150 ಕೋಟಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ಘಟಕ (ಟ್ರಾಮಾ ಕೇರ್ ಸೆಂಟರ್) ಸ್ಥಾಪಿಸಲಾಗುವುದು. ಮೆಡಿಕಲ್ ಕಾಲೇಜು ಆರಂಭಕ್ಕೆ ₹ 70 ಕೋಟಿ ಅನುದಾನ ಬಂದಿದೆ. 2020–21ನೇ ಸಾಲಿಗೆ ಪ್ರವೇಶಾತಿ ಮಾಡಿಕೊಳ್ಳುವ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.

ಪ್ರಮುಖರಾದ ಮಾ. ನಾಗರಾಜ, ನಂಜುಂಡೇಶ ಕಳ್ಳೇರ, ಬಾಬುಸಾಬ ಮೋಮಿನಗಾರ, ಲಲಿತಾ ಗುಂಡೇನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.