ADVERTISEMENT

ಕೊಲೆ ಪ್ರಕರಣ: ವೈದ್ಯಾಧಿಕಾರಿ, ಸಿಬ್ಬಂದಿ ಬಂಧನ

ಶಿಬಾರ ಕೊಲೆ ಪ್ರಕರಣ: ಎಸ್ಪಿ ಹನುಮಂತರಾಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:01 IST
Last Updated 1 ಆಗಸ್ಟ್ 2022, 16:01 IST
ಹನುಮಂತರಾಯ, ಎಸ್ಪಿ 
ಹನುಮಂತರಾಯ, ಎಸ್ಪಿ    

ಹಾವೇರಿ: ಗುತ್ತಲ ಪೊಲೀಸ್‌ ಠಾಣಾ ವ್ಯಾಪ್ತಿಯ ಹಾವೇರಿ ತಾಲ್ಲೂಕು ಸೋಮನಕಟ್ಟಿ ಶಿಬಾರ ಬಳಿ ಕಳೆದೆರಡು ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲ್ಲೂಕಿನ ಸೋಮನಕಟ್ಟಿ ಶಿಬಾರ ಬಳಿ ಜು.2ರಂದು ಕೊಲೆಯಾಗಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಸ್ಥಳ ಪರೀಶಿಲನೆ ನಡೆಸಿದಾಗ ಹೂವಿನಹಡಗಲಿಯ ತುಂಗಭದ್ರಾ ಬಡಾವಣೆಯ ನಿವಾಸಿ ನವೀನ ರಾಠೋಡ್ ಎಂದು ತಿಳಿದುಬಂದಿತ್ತು.

ಮೃತ ನವೀನ ಮೈಮೇಲೆ ಹಾಗೂ ಕುತ್ತಿಗೆ ಬಳಿ ಗಾಯವಾಗಿದ್ದು, ಕೊಲೆಯಾಗಿರುವ ಖಚಿತ ಮಾಹಿತಿ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಮೈಲಾರ ಗ್ರಾಮದ ಪಿಎಚ್‍ಸಿಯ ವೈದ್ಯಾಧಿಕಾರಿ ಡಾ.ಚಿರಂಜೀವಿ ಶಾಂತನಾಯ್ಕ್ ಹಾಗೂ ಆಸ್ಪತ್ರೆಯ ಸಹಾಯಕ ಸಿಬ್ಬಂದಿ ಪ್ರಶಾಂತ ಲಮಾಣಿ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದರು.

ADVERTISEMENT

ಕೊಲೆಯಾದ ವ್ಯಕ್ತಿ ನವೀನ್ ರಾಠೋಡ್ ಸಂಬಂಧಿಕರಾದ ವೈದ್ಯ ಡಾ.ಚಿರಂಜೀವ ಅವರ ಮನೆಯಲ್ಲಿ ವಾಸವಾಗಿದ್ದ. ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದು, ಮನೆಯಲ್ಲಿರುವ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದ. ಕುಡಿಯಲು ಹಣ ನೀಡದಿದ್ದರೆ ಮಕ್ಕಳನ್ನು ಬಿಲ್ಡಿಂಗ್ ಕೆಳಗೆ ಎಸೆಯುತ್ತೇನೆ ಎಂದು ಹೆದರಿಕೆ ಹಾಕುತ್ತಿದ್ದು ಹೀಗೆ ವೈದ್ಯರ ಕುಟುಂಬದವರಿಗೆ ತೋಂದರೆ ನೀಡುತ್ತಿದ್ದರಿಂದ ಕುಟುಂಬದವರು ಬೇಸತ್ತಿದ್ದರು.

ಕೊನೆಯಲ್ಲಿ ಆರೋಪಿಗಳು ಸಂಚು ನಡೆಸಿ ಮದ್ಯದಲ್ಲಿ ನಿದ್ದೆ ಗುಳಿಗೆ ಹಾಕಿ ಮಿಶ್ರಣ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಆತನನ್ನು ಉರುಲು ಹಾಕಿ ಕೊಲೆ ಮಾಡಿ ಶಿಬಾರ ಬಳಿ ಎಸೆದು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ವಿಜಯಕುಮಾರ ಸಂತೋಷ, ಡಿವೈಎಸ್‍ಪಿ ಡಾ.ಶಿವಾನಂದ ಚಲವಾದಿ, ಡಿಸಿಆರ್‍ಬಿ ಡಿಎಸ್‍ಪಿ ಎಂ.ಎಸ್ ಪಾಟೀಲ ಇದ್ದರು.

ವಿವಿಧ ಪ್ರಕರಣ: ಆರೋಪಿಗಳ ಬಂಧನ

ಬಂಕಾಪುರ ಬಳಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹8,500 ನಗದು, ಕಾರು ಹಾಗೂ ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

ಹಾನಗಲ್ಲ ತಾಲ್ಲೂಕು ನಾಲ್ಕರ ಕ್ರಾಸ್ ಬಳಿ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳು ಹಾಗೂ ₹36 ಸಾವಿರ ಮೌಲ್ಯದ ಕೃಷಿ ರಂಟೆಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಹಾನಗಲ್ಲ ತಾಲ್ಲೂಕು ಬೊಮ್ಮನಹಳ್ಳಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 10 ತೊಲೆ ಬಂಗಾರ, 33 ಗ್ರಾಂ ಬೆಳ್ಳಿ, ₹2.10 ಲಕ್ಷ ನಗದು, ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಿಗ್ಗಾವಿಯಲ್ಲಿ ನಡೆದ 5 ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಬೈಕ್‍ಗಳು, 8 ತೊಲೆ ಬಂಗಾರ, ₹1 ಲಕ್ಷ ಮೌಲ್ಯದ ಬೆಳ್ಳಿ, ಯುಪಿಎಸ್ ಬ್ಯಾಟರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.