ADVERTISEMENT

ಮೇಡ್ಲೇರಿ ಸ್ಮಶಾನ; ಕೆಸರು ಗದ್ದೆಯೇ ದಾರಿ

ಮೂಲ ಸೌಕರ್ಯ ವಂಚಿತ ಸ್ಮಶಾನ: ಅಧಿಕಾರಿಗಳಿಗೆ ವಿಡಿಯೊ ಕಳುಹಿಸಿ ಗ್ರಾಮಸ್ಥರ ಆಕ್ರೋಶ

ಮುಕ್ತೇಶ ಕೂರಗುಂದಮಠ
Published 18 ಜುಲೈ 2025, 2:24 IST
Last Updated 18 ಜುಲೈ 2025, 2:24 IST
ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಕೆಸರು ಗದ್ದೆಯಲ್ಲಿ ಶವ ಹೊತ್ತು ಸಾಗುತ್ತಿರುವ ಜನರು
ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಕೆಸರು ಗದ್ದೆಯಲ್ಲಿ ಶವ ಹೊತ್ತು ಸಾಗುತ್ತಿರುವ ಜನರು   

ರಾಣೆಬೆನ್ನೂರು: ತಾಲ್ಲೂಕಿನ ಮೆಡ್ಲೇರಿ ಗ್ರಾಮದ ಸ್ಮಶಾನ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಯಾರಾದರೂ ಮೃತಪಟ್ಟರೆ ಶವವನ್ನು ಹೊತ್ತು ಕೆಸರು ಗದ್ದೆಯ ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದ ದುಸ್ಥಿತಿ ಬಂದೊದಗಿದೆ.

ಜಿಲ್ಲೆಯ ಹಲವು ಕಡೆಗಳಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಗ್ರಾಮಸ್ಥರೂ ಇಂದಿಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಮೇಡ್ಲೇರಿ ಸ್ಮಶಾನವೇ ನೈಜ ನಿದರ್ಶನ.

ಗ್ರಾಮದ ಸ್ಮಶಾನ ರಸ್ತೆ ಕಿರಿದಾಗಿದ್ದು, ಎರಡು ಜಮೀನಿನ ನಡುವೆ ಹಾದು ಹೋಗಿದೆ. ಎದುರಿಗೆ ಟ್ರ್ಯಾಕ್ಟರ್ ಹಾಗೂ ಚಕ್ಕಡಿಗಳು ಬಂದರೆ, ಪಕ್ಕದಲ್ಲಿ ಹೋಗದಿರಷ್ಟು ಜಾಗವಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸ್ಮಶಾನ ರಸ್ತೆಯೇ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ.

ADVERTISEMENT

ಗ್ರಾಮದ ನಿವಾಸಿ ಕರಬಸಪ್ಪ ಬಸಪ್ಪ ಹುಣಸೀಕಟ್ಟಿ ಅವರು ಜುಲೈ 16ರಂದು ನಿಧನ ಹೊಂದಿದ್ದರು. ಇವರ ಶವವನ್ನು ಹೊತ್ತುಕೊಂಡಿದ್ದ ಜನರು, ಕೆಸರು ಗದ್ದೆಯಲ್ಲಿ ನಡೆದುಕೊಂಡು ಹೋಗಿದ್ದರು. ಈ ವಿಡಿಯೊವನ್ನು ಗ್ರಾಮಸ್ಥರು ಚಿತ್ತೀಕರಿಸಿದ್ದಾರೆ. ಅದೇ ವಿಡಿಯೊವನ್ನು ಜಿಲ್ಲಾಧಿಕಾರಿ, ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳಿಗೆ ಕಳುಹಿಸಿ ಅಳಲು ತೋಡಿಕೊಂಡಿದ್ದಾರೆ.

ಸ್ಮಶಾನದಲ್ಲಿ ಬೇಸಿಗೆಯಲ್ಲಿ ನಿಲ್ಲಲು ನೆರಳಿನ ವ್ಯವಸ್ಥೆ ಇಲ್ಲ. ಸುಸ್ತಾದರೆ ಕುಡಿಯಲು ನೀರಿಲ್ಲ. ಸಂಜೆ ಹೊತ್ತಿನಲ್ಲಿ ಅಂತ್ಯಸಂಸ್ಕಾರಕ್ಕೆ ಶವ ತಂದರೆ ಹರ ಸಾಹಸ ಪಡಬೇಕಾಗುತ್ತದೆ. ಬೀದಿ ದೀಪ ಇಲ್ಲದ ಕಾರಣ, ಬೆಳಕಿಗಾಗಿ ಜನರು ಮೊಬೈಲ್ ದೀಪ ಹಿಡಿದು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ- ಕಡ್ಡಿ, ಕಲ್ಲು–ಮುಳ್ಳುಗಳು ಹೆಚ್ಚಾಗಿದೆ.

ಗ್ರಾಮದ ಮೂರು ಕಡೆ ವಿವಿಧ ಸಮಾಜದವರ ಸ್ಮಶಾನಗಳಿದ್ದು, ಅವುಗಳ ಅಭಿವೃದ್ಧಿ ಮರೀಚಿಕೆಯಾಗಿದೆ.

‘ಸ್ಮಶಾನಗಳ ಆವರಣಕ್ಕೆ ಗೋಡೆ ಇಲ್ಲ. ಮುಳ್ಳು–ಗಂಟಿಗಳಿಂದ ಕೂಡಿರುವ ಸ್ಥಳದಲ್ಲಿ ಶವಗಳನ್ನು ಹೂಳಬೇಕಾಗಿದೆ. ಮಳೆಗಾಲದಲ್ಲಿ ಜನರಿಗೆ ಹೆಚ್ಚಿನ ತೊಂದರೆಯಾಗಿದೆ. ಅಂತ್ಯಕ್ರಿಯೆಗೆ ಬರುವ ವೃದ್ಧರು ಭಯದೊಂದಿಗೆ ಸ್ಮಶಾನದಲ್ಲಿ ತೆರಳುವಂತಾಗಿದೆ. ಸ್ಮಶಾನ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿ ಸಾಕಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿಳ್ಳೆಪ್ಪ ಅಣ್ಣೇರ ಹೇಳಿದರು.

‘ಮೇಡ್ಲೇರಿ ಮಾತ್ರವಲ್ಲದೇ ಜಿಲ್ಲೆಯ ಬಹುತೇಕ ಸ್ಮಶಾನಗಳ ಅಭಿವೃದ್ಧಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮರೆತಿದ್ದಾರೆ. ಸ್ಮಶಾನಕ್ಕೆ ಯಾವೊಬ್ಬ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಭೇಟಿ ನೀಡುವುದಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಜಮೀನು ನಡುವೆ ಕಿರಿದಾದ ರಸ್ತೆ ಸ್ಮಶಾನಕ್ಕೆ ಬರುವ ವೃದ್ಧರಿಗೆ ತೊಂದರೆ ಸ್ಮಶಾನ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ

ಜುಲೈ 19ರಂದು ಸಾಮಾನ್ಯ ಸಭೆಯಿದೆ. ಸ್ಮಶಾನ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು
ನಾಗರಾಜ ಲೆಕ್ಕಿಕೊನಿ ಮೇಟ್ಲೇರಿ ಪಿಡಿಒ
ಮೇಡ್ಲೇರಿ ಸ್ಮಶಾನದ ಅವ್ಯವಸ್ಥೆ ವಿಡಿಯೊ ನೋಡಿದ್ದೇನೆ. ತಾ.ಪಂ.–ಗ್ರಾ.ಪಂ. ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ
ಆರ್‌.ಎಚ್‌. ಭಾಗವಾನ ರಾಣೆಬೆನ್ನೂರು ತಹಶೀಲ್ದಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.