ADVERTISEMENT

ಗ್ಯಾರಂಟಿ ವಂಚಿತರಿಗೆ ನ್ಯಾಯ ನೀಡಿ: ಶಾಸಕ ಪಠಾಣ

ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:05 IST
Last Updated 22 ಜೂನ್ 2025, 14:05 IST
ಶಿಗ್ಗಾವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಸಾಮಗ್ರಿಗಳನ್ನು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ವಿತರಿಸಿದರು
ಶಿಗ್ಗಾವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಸಾಮಗ್ರಿಗಳನ್ನು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ವಿತರಿಸಿದರು   

ಶಿಗ್ಗಾವಿ: ಪಡಿತರ ಕಾರ್ಡ್‌, ಆಧಾರ್‌ ಕಾರ್ಡ್‌ ಸರಿಯಾಗಿ ಸಿಗದ ಜನರು ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪರದಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ನ್ಯಾಯ ನೀಡುವ ಕಾರ್ಯ ಮಾಡಬೇಕು. ಕೆಲವರು ಇನ್ನೂ ಕಚೇರಿ ಅಲೆದಾಡುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಸಭೆಯ ಮುಂದೆ ತೆರೆದಿಟ್ಟರು.

ಪಡಿತರ ಫಲಾನುಭವಿಗಳಿಗೆ ಸರಿಯಾಗಿ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದರೆ ಪಡಿತರ ಅಂಗಡಿಗಳ ಮಾಲೀಕರಿಗೆ ಒಂದು ಕ್ವಿಂಟಲ್‌ಗೆ ₹ 150ರಂತೆ ಸುಮಾರು 3 ತಿಂಗಳ ಪಡಿತರ ಕಮಿಷನ್ ವಿತರಿಸಬೇಕಾಗಿತ್ತು. ಆದರೆ ಈ ವರೆಗೆ ಸರ್ಕಾರ ಕಮಿಷನ್‌ ಹಣ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಪಡಿತರ ಅಂಗಡಿ ಮಾಲಿಕರಿಗೆ ತೊಂದರೆಯಾಗುತ್ತಿದೆ. ಸರ್ವರ್ ಸಂಪರ್ಕ ಸರಿಯಾಗಿ ಸಿಗುತ್ತಿಲ್ಲ. ಅದರಿಂದಾಗಿ ಪಡಿತರ ಅಂಗಡಿ ಮಾಲೀಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಅಂಗಡಿ ಮಾಲೀಕರು ಸಭೆಯಲ್ಲಿ ವಿವರಿಸಿದರು.

ADVERTISEMENT

ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಮಾತನಾಡಿ, ‘ಹೆಸ್ಕಾಂ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನ ವಾಸಿಸುವ ಮನೆಗಳಿಗೆ ತಕ್ಷಣ ಸಂಪರ್ಕ ಕಲ್ಪಿಸಬೇಕು. ಕಾರ್ಖಾನೆ ಮತ್ತು ಗಣ್ಯರು, ಶ್ರೀಮಂತರು ವಾಸಿಸುವ ವಾರ್ಡ್‌ಗಳಲ್ಲಿ ಮಾತ್ರ ವಿತರಿಸಿ ತಾರತಮ್ಯ ತೋರಬಾರದು. ಜನರಿಗೆ ತೊಂದರೆ ನೀಡುವ ವಿದ್ಯುತ್ ಟಿ.ಸಿಗಳನ್ನು ತಕ್ಷಣ ಸ್ಥಳಾಂತರಿಸಬೇಕು’ ಎಂದು ಹೇಳಿದರು.

ಅರ್ಜಿ ಸಲ್ಲಿಸಿದ ಜನರಿಗೆ ಎನ್ಒಸಿ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗೆ ತಿಳಿಸಿದರು.

ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿದ್ದು, ಬಸ್ ಚಾಲಕರು, ನಿರ್ವಾಹಕರು ಮಹಿಳೆಯರು ಕೈಮಾಡಿದಲ್ಲಿ ಬಸ್‌ ನಿಲ್ಲಿಸಬೇಕು. ಮಹಿಳೆಯರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಗ್ರಾಮೀಣ ಪ್ರದೇಶದ ಕೆಲವು ಗ್ರಾಮಗಳಲ್ಲಿ ಚಾಲಕರು ಬಸ್ ನಿಲ್ಲಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ. ಅಧಿಕಾರಿಗಳು ಚಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ ಸಾಳವಂಕಿ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ ಸೇರಿದಂತೆ ಗ್ಯಾರಂಟಿ ಯೋಜನೆಯ ಎಲ್ಲ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಏಜೆಂಟರ ಹಾವಳಿ ಹೆಚ್ಚಳ: ಶಾಸಕ

ಆಧಾರ್‌ ಕಾರ್ಡ್‌ ಪಡಿತರ ಕಾರ್ಡ್‌ ಮಾಡಿಸಲು ಏಜೆಂಟರ ಹಾವಳಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಜನರು ಇಂತಹ ಏಜಂಟರಿಗೆ ಯಾವುದೇ ಹಣ ನೀಡಬಾರದು. ಅಂಥವರು ಕಂಡುಬಂದಲ್ಲಿ ತಕ್ಷಣ ತಿಳಿಸಬೇಕು. ತಾಲ್ಲೂಕಿನಲ್ಲಿ ಕಾರ್ಡ್‌ಗಳು ಬಾರದ 118 ಜನರ ಪಟ್ಟಿ ನೀಡಿ. ಅವರ ಸಮಸ್ಯೆ ಪರಿಹಾರ ಮಾಡಲಾಗುತ್ತದೆ. ಪಡಿತರ ವಿತರಣೆಗೆ ಇಡೀ ದಿನ ಕಳೆಯಬೇಡಿ. ಬಡ ಕೂಲಿಕಾರರು ದಿನದ ಕೂಲಿ ಬಿಟ್ಟು ರೇಷನ್ ಪಡೆಯಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.