ADVERTISEMENT

ಮಾನಸಿಕ ಕಾಯಿಲೆಗೆ ಚಿಕಿತ್ಸೆ ಅಗತ್ಯ: ವಿ.ಆರ್ ಗುಡಿ ಅಭಿಮತ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಆರ್ ಗುಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:00 IST
Last Updated 14 ಅಕ್ಟೋಬರ್ 2020, 18:00 IST
ಹಾವೇರಿಯಲ್ಲಿ ಬುಧವಾರ ಮಾನಸಿಕ ಆರೋಗ್ಯ ಕುರಿತ ಜಾಗೃತಿ ಪ್ರಚಾರ ವಾಹನಕ್ಕೆ ನ್ಯಾಯಾಧೀಶ ವಿ.ಆರ್ ಗುಡಿ ಚಾಲನೆ ನೀಡಿದರು
ಹಾವೇರಿಯಲ್ಲಿ ಬುಧವಾರ ಮಾನಸಿಕ ಆರೋಗ್ಯ ಕುರಿತ ಜಾಗೃತಿ ಪ್ರಚಾರ ವಾಹನಕ್ಕೆ ನ್ಯಾಯಾಧೀಶ ವಿ.ಆರ್ ಗುಡಿ ಚಾಲನೆ ನೀಡಿದರು   

ಹಾವೇರಿ: ‘ಮಾನಸಿಕ ಕಾಯಿಲೆಗೆ ತುತ್ತಾದವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಬೇಕು. ಮಾನಸಿಕ ರೋಗಿಗಳನ್ನು ಕಾಣುವ ಸಮಾಜದ ದೃಷ್ಟಿಕೋನ ಬದಲಾಗಬೇಕು. ಸಂವಿಧಾನದತ್ತವಾಗಿ ಮೂಲಭೂತ ಹಕ್ಕುಗಳು ಎಲ್ಲರಿಗೂ ಸಮಾನವಾಗಿರುತ್ತವೆ' ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಆರ್ ಗುಡಿ ಹೇಳಿದರು.

ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಹಾವೇರಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ನಗರದ ಕೆ.ಎಲ್‍.ಇ ಸಂಸ್ಥೆಯ ಸಿ.ಬಿ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನಸಿಕ ಕಾಯಿಲೆ ಶಾಶ್ವತ ರೋಗವಲ್ಲ, ಮಾನಸಿಕ ಕಾಯಿಲೆ ಒತ್ತಡದಿಂದ ಬರುವಂತಹ ಸಮಸ್ಯೆ. ಇದೀಗ ಇಂತಹ ಸಮಸ್ಯೆ ಎಲ್ಲ ರಂಗದಲ್ಲೂ ಇದೆ. ಶಿಸ್ತುಬದ್ಧವಾದ ಜೀವನ ಶೈಲಿ, ತಾಳ್ಮೆಯಿಂದ ಸಮಸ್ಯೆಗಳನ್ನು ಎದುರಿಸುವ ಧೈರ್ಯ, ವ್ಯವಸ್ಥಿತವಾದ ಕಾರ್ಯಶೈಲಿ ರೂಢಿಸಿಕೊಂಡರೆ ಎಂತಹದೇ ಒತ್ತಡದ ಸಂದರ್ಭವನ್ನು ಸಮರ್ಥವಾಗಿ ಎದುರಿಸಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ADVERTISEMENT

ವಕೀಲ ಜಿ.ಕೆ ಕಮ್ಮಾರ ಮಾತನಾಡಿ, ‘ಬಾಲ್ಯ ಮತ್ತು ಯೌವನ ಸಂದರ್ಭದಲ್ಲಿ ಮಕ್ಕಳಿಗೆ ಪಾಲಕರು ಸರಿಯಾದ ಮಾರ್ಗದರ್ಶನ ಮಾಡಬೇಕು, ತಪ್ಪು ದಾರಿಯಲ್ಲಿ ನಡೆಯುವಾಗ ತಿದ್ದಿ ಸರಿಯಾದ ಮಾರ್ಗದರ್ಶನ ಮಾಡಿ ಆತ್ಮವಿಶ್ವಾಸದಿಂದ ಜೀವನ ರೂಪಿಸಿದರೆ ಒತ್ತಡ ರಹಿತವಾದ, ಮಾನಸಿಕ ಆರೋಗ್ಯದಿಂದ ಜೀವನ ನಡೆಸಲು ಸಾಧ್ಯ’ ಎಂದು ಹೇಳಿದರು.

ಮನೋರೋಗ ತಜ್ಞ ಡಾ.ವಿಜಯಕುಮಾರ ಅವರು ಮಾತನಾಡಿ, ಮಾನಸಿಕ ಕಾಯಿಲೆ ಎಂದರೆ ಹುಚ್ಚ ಎಂಬ ಪರಿಕಲ್ಪನೆ ಸಮಾಜದಿಂದ ದೂರವಾಗಬೇಕಾಗಿದೆ, ಇದು ಕೆಲವರ ಬುದ್ಧಿಮಟ್ಟಕ್ಕೆ ಅವಲಂಬನೆಯಾಗಿರುತ್ತದೆ. ಇದು ಶಾಶ್ವತ ಅಲ್ಲ, ಕೇವಲ ಕ್ಷಣ ಮಾತ್ರಕ್ಕೆ ಸಿಮಿತ ಅಷ್ಟೇ. ಕೆಲವರು ಆತಂಕ ಮಾಡಿಕೊಳ್ಳುವುದು, ಮಾನಸಿಕ ಗೀಳಿಗೆ ಒಳಗಾಗುವುದು, ಅಸಂಬದ್ಧ ಆಲೋಚನೆಗಳು ಇಂತಹ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳಿಗೆ ಸಿಲುಕಿದಾಗ ಹಿರಿಯರ ಹಾಗೂ ವೈದ್ಯರ ಸಲಹೆ ಮಾರ್ಗದರ್ಶನದಿಂದ ಮಾನಸಿಕ ಅಸ್ವಸ್ತತೆಯಿಂದ ಹೊರಬರಬಹುದು ಎಂದು ಸಲಹೆ ನೀಡಿದರು.

ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಚನ್ನಪ್ಪ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಠಾನಾಧಿಕಾರಿ ಡಾ. ಚನ್ನಬಸಯ್ಯ ವಿರಕ್ತಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.