ADVERTISEMENT

ಹಾಲು ಸಂಸ್ಕರಣಾ ಡೇರಿ ಮಂಜೂರು: ಸಚಿವ ಬಸವರಾಜ ಬೊಮ್ಮಾಯಿ

₹15 ಕೋಟಿ ಅನುದಾನ: ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಮೇ 2021, 12:11 IST
Last Updated 27 ಮೇ 2021, 12:11 IST
ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ 
ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ    

ಹಾವೇರಿ: ‘ಧಾರವಾಡ ಹಾಲು ಒಕ್ಕೂಟದ ವತಿಯಿಂದ ಜಿಲ್ಲೆಯ ಜಂಗಮನಕೊಪ್ಪ ಗ್ರಾಮದಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ‘ಹಾಲು ಸಂಸ್ಕರಣಾ ಡೇರಿ’ ಹಾಗೂ ‘ಅಲ್ಟ್ರಾ ಹೀಟ್ ಟ್ರೀಟ್‌ಮೆಂಟ್‌ ಪ್ಯಾಕಿಂಗ್ ಘಟಕ’ವನ್ನು ₹90 ಕೋಟಿ ರೂಪಾಯಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರ ಬಹುದಿನಗಳ ಈ ಬೇಡಿಕೆಗೆ ಅನುಮೋದನೆ ದೊರೆಯಿತು ಎಂದು ಅವರು ತಿಳಿಸಿದರು.

ಧಾರವಾಡ ಹಾಲು ಒಕ್ಕೂಟ ಮಹಾಮಂಡಳಿ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿ ಒಟ್ಟು 45 ಸಾವಿರ ಹಾಲು ಉತ್ಪಾದಕ ಸದಸ್ಯರಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲೇ 22 ಸಾವಿರ ಹಾಲು ಉತ್ಪಾದಕರಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಶೇಕಡ 20ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ADVERTISEMENT

ಈ ನಿಟ್ಟಿನಲ್ಲಿ ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕದ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಗೆ ಸಚಿವ ಸಂಪುಟದಲ್ಲಿಅನುಮತಿ ದೊರೆತಿದೆ.ಪಿಪಿಪಿ ಮಾದರಿಯ ಈ ಯೋಜನೆಗೆ ಸರ್ಕಾರದ ವತಿಯಿಂದ ₹15 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.