ADVERTISEMENT

ಇಚ್ಛೆಯಂತೆ ಲೆಕ್ಕಚಾರ; ಬೆವರಿಳಿಸಿದ ಬೊಮ್ಮಾಯಿ

ನೆರೆ ಪ್ರದೇಶಗಳ ಮರುಸಮೀಕ್ಷೆಗೆ ಸೂಚನೆ * ಪರಿಷ್ಕೃತ ವರದಿ ಸಲ್ಲಿಕೆಗೆ ಮೂರು ದಿನದ ಗಡುವು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 8:53 IST
Last Updated 29 ಆಗಸ್ಟ್ 2019, 8:53 IST
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಬೆಳೆ ಹಾನಿ ಕುರಿತು ವಿವರಣೆ ನೀಡುತ್ತಿರುವುದು 
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಬೆಳೆ ಹಾನಿ ಕುರಿತು ವಿವರಣೆ ನೀಡುತ್ತಿರುವುದು    

ಹಾವೇರಿ: ‘ಪ್ರವಾಹದಿಂದ ಜಿಲ್ಲೆಯಲ್ಲಿ 14,302 ಮನೆಗಳಿಗೆ ಹಾನಿಯಾಗಿದೆ ಅಂತ ನೀವೇ ರಿಪೋರ್ಟ್ ಸಿದ್ಧಪಡಿಸಿದ್ದೀರಿ. ಆದರೆ, 2,700 ಮನೆಗಳ ಮಾಲೀಕರಿಗೆ ಪರಿಹಾರ ಕೊಡಬಹುದು ಎಂದು ಹೇಳುತ್ತಿದ್ದೀರಿ. ಉಳಿದವರೇನು ಮಣ್ಣು ತಿನ್ನಬೇಕಾ? ಯಾಕ್ರಿ ಇಷ್ಟೊಂದು ಅಮಾನವೀಯವಾಗಿ ವರ್ತಿಸ್ತೀರಾ. ಸಂತ್ರಸ್ತರ ಸೌಲಭ್ಯಗಳನ್ನೂ ಕೊಳ್ಳೆ ಹೊಡಿಯೋಕೆ ನಾಚಿಕೆ ಆಗಲ್ವಾ...’

ನೂತನ ಸಚಿವ ಬಸವರಾಜ ಬೊಮ್ಮಾಯಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಗುರುವಾರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸಭೆ ಕರೆದು ಅಧಿಕಾರಿಗಳ ಬೆವರಿಳಿಸಿದರು.

‘ಜಿಲ್ಲೆಯಲ್ಲಿ 48 ಮನೆಗಳಷ್ಟೇ ಪೂರ್ತಿ ಪ್ರಮಾಣದಲ್ಲಿ ಬಿದ್ದಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಸಚಿವರಿಗೆ ವರದಿ ಒಪ್ಪಿಸಿದರು. ಕೂಡಲೇ ಗರಂ ಆದ ಸಚಿವರು, ‘ಏನ್ರೀ... ಯಾವ ಲೆಕ್ಕಾಚಾರ ಹಾಕಿ 48 ಮನೆಗಳಷ್ಟೇ ಬಿದ್ದಿರೋದು ಅಂತಿದೀರಾ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳು ಗೊತ್ತೇನ್ರಿ ನಿಮ್ಗೆ. ವಾಸ ಮಾಡಲು ಯೋಗ್ಯವಾಗಿಲ್ಲದ ಎಲ್ಲ ಮನೆಗಳನ್ನೂ ‘ಪೂರ್ಣ ಹಾನಿ’ ಎಂದೇ ಪರಿಗಣಿಸಬೇಕು. ನಾನು ಎಲ್ಲ ಊರುಗಳನ್ನು ನೋಡಿಕೊಂಡೇ ಇಲ್ಲಿಗೆ ಬಂದಿರೋದು. ಸರ್ಕಾರನೇ ಪರಿಹಾರ ಕೊಡ್ತೀನಿ ಅನ್ನೋವಾಗ, ನೀವ್ಯಾಕ್ರಿ ಸುಳ್ಳು ಲೆಕ್ಕ ಬರೀತೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಚಾವಣಿ ಕುಸಿದಿರುವ ಮನೆಗಳನ್ನೂ ‘ಭಾಗಶಃ ಹಾನಿ’ ಎಂದು ರಿಪೋರ್ಟ್ ಬರೆದಿದ್ದೀರಿ. ನಿಮ್ಮ ಮನೆಯ ಚಾವಣಿ ಹೋದ್ರೆ, ಅಲ್ಲಿ ವಾಸ ಇರ್ತೀರೇನ್ರಿ. ಜಿಲ್ಲೆಯಾದ್ಯಂತ ಮರು ಸಮೀಕ್ಷೆ ಆಗಬೇಕು. ಗೋಡೆ–ಚಾವಣಿ ಕುಸಿದ ಮನೆಗಳನ್ನೂ ‘ಪೂರ್ಣ ಕುಸಿದ ಮನೆ’ ಎಂದು ವರದಿ ಸಿದ್ಧಪಡಿಸಿ, ಮೂರು ದಿನಗಳ ಒಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ’ ಎಂದು ಎಚ್ಚರಿಕೆ ನೀಡಿದರು.

ಅಭಿನಂದನೆಯಿಂದ ಶುರುವಾಗಿ...

‘ನೂತನ ಸಚಿವನಾದ ಬಳಿಕ ಜಿಲ್ಲೆಯಲ್ಲಿ ಮೊದಲ ಸಭೆ ನಡೆಸುತ್ತಿದ್ದೇನೆ. ನೆರೆ ಬಂದಾಗ ಎಲ್ಲರೂ ಶ್ರಮವಹಿಸಿ ಹೆಚ್ಚು ಜೀವಹಾನಿ ಆಗದಂತೆ ನೋಡಿಕೊಂಡಿದ್ದೀರಿ. ಅದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಹೇಳುತ್ತೇನೆ. ಆದರೆ, ಸವಾಲು ಶುರುವಾಗಿರುವುದೇ ಈಗ. ಪರಿಹಾರ ಹಂಚಿಕೆ ವಿಚಾರದಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಮರುಕ್ಷಣವೇ ‘ನಾನು ಯಾರ ವಿವರಣೆಯನ್ನೂ ಕೇಳಲು ಇಲ್ಲಿಗೆ ಬಂದಿಲ್ಲ. ಪರಿಣಾಮಕಾರಿ ಕೆಲಸ ಆಗಬೇಕು. ನನಗೆ ಫಲಿತಾಂಶ ಬೇಕಷ್ಟೇ’ ಎಂದು ಗುಡುಗಿದರು.

‘ಜಿಲ್ಲಾಡಳಿತ ಸಿದ್ಧಪಡಿಸಿರುವ ವರದಿ ನೋಡಿದರೆ, ಅದು ಹೇಗೆ ಕೆಲಸ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ಎಲ್ಲರೂ ಕೂತಲ್ಲೇ ರಿಪೋರ್ಟ್ ಮಾಡಿದ್ದೀರಿ. ಇದನ್ನು ನಾನು ಒಪ್ಪುವುದಿಲ್ಲ. ಯಾವ ಅಧಿಕಾರಿ, ಯಾವ ಕ್ಷೇತ್ರಕ್ಕೆ ಹೋಗಿ ವರದಿ ಮಾಡಿಕೊಂಡು ಬಂದಿದ್ದಾರೆ ಎಂಬ ವಿವರವಾದ ವರದಿ ನನಗೆ ಬೇಕು. ಹೋಬಳಿ ಮಟ್ಟದಿಂದಲೂ ವಿವರಣೆ ಬೇಕು’ ಎಂದರು.

ಜಂಟಿ ನಿರ್ದೇಶಕರಿಗೂ ಚಾರ್ಜ್‌: ‘ವರದಿ ನದಿ ತುಂಬಿ ಕುಣಿಮೆಳ್ಳಿಹಳ್ಳಿ, ಕಳಸೂರು, ಕರ್ಜಗಿ, ಹಲಸೂರು ಗ್ರಾಮಗಳು ಜಲಾವೃತವಾಗಿದ್ದನ್ನು ಹಾಗೂ ಆ ಭಾಗದ ಎಲ್ಲ ಬೆಳೆಗಳೂ ಸರ್ವನಾಶವಾಗಿದ್ದನ್ನು ಎಲ್ಲರೂ ನೋಡಿದ್ದೇವೆ. ಆದರೆ, ‘ವರದಾ ನದಿ ತುಂಬಿ ಹರಿದಿಲ್ಲ, ಭೂಸವಕಳಿಯೇ ಆಗಿಲ್ಲ’ ಎಂದು ವರದಿ ಇದೆ. ನಿಮಗೆ ಪರಿಸ್ಥಿತಿ ಅರ್ಥ ಆಗ್ತಿಲ್ವ. ನೀವು ಟ್ರೈನಿಂಗ್ ಕ್ಲಾಸ್‌ಗೆ ಹೋಗಿ ಬಂದು ವರದಿ ಸಿದ್ಧಪಡಿಸಿಕೊಡಿ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಅವರನ್ನೂ ತರಾಟೆಗೆ ತೆಗೆದುಕೊಂಡರು.

‘ಪಿಬ್ಲ್ಯುಡಿ, ಸಣ್ಣ ನೀರಾವರಿ ಅಧಿಕಾರಿಗಳ ಬಂಡವಾಳವೂ ನನಗೂ ಗೊತ್ತಿದೆ. ವರ್ಗಾವಣೆ ಮಾಡಿದರೆ ಕೋರ್ಟ್‌ಗೆ ಹೋಗುವಷ್ಟು ಪ್ರಭಾವಿಗಳಾಗಿದ್ದರೆ. ಈಗ ಸರ್ಕಾರ ಬದಲಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಚುರುಕಾಗಿ ಕೆಲಸ ಮಾಡಬೇಕು.ಎಲ್ಲ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡುವುದಾಗಿ ಮಾಧ್ಯಮಗಳ ಮುಂದೆಯೇ ಹೇಳಿದ್ದೇನೆ. ಆ ಮಾತಿನಂತೆಯೇ ನಾನು ನಡೆದುಕೊಳ್ಳಬೇಕು. ಹೀಗಾಗಿ, ಈ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ’ ಎಂದೂ ಬೊಮ್ಮಾಯಿ ಎಚ್ಚರಿಸಿದರು.

ನಿಮ್ ಮನೆಗೆ ನೀರು ಸುರೀತಿನಿ..

‘400 ಮನೆ ಬಿದ್ದಿರುವಾಗ ನೀವ್ಯಾಕ್ರಿ ಬರೀ 262 ಮನೆಗಳಿಗಷ್ಟೇ ತಲಾ ₹ 10 ಸಾವಿರ ಪರಿಹಾರ ಕೊಟ್ಟಿದೀರಿ. ನಿಮ್ಮನ್ನ ಯಾಕೆ ಅಮಾನತು ಮಾಡಬಾರದು? ವಿವರಣೆ ಕೇಳಿದ್ರೆ, ‘ಮನೆ ಬಿದ್ದಿರಲಿಲ್ಲ. ನೀರಷ್ಟೇ ನಿಂತಿತ್ತು’ ಅಂತೀರಾ. ನಾಳೆನೇ ನಿಮ್ ಮನೆಗೆ ನಾಕ್ ಬಕೀಟ್ ನೀರು ಸುರೀತಿನಿ. ಇರೋಕಾಗತ್ತ ನಿಮ್ಗೆ. ನನ್ನ ದಾರಿ ತಪ್ಪಿಸೋ ಕೆಲ್ಸ ಮಾಡೋಕೆ ಹೊರಟಿದ್ದೀರಾ’ ಎಂದೂ ಹಾನಗಲ್ ತಹಶೀಲ್ದಾರರನ್ನು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.

ನೀವೇನಾ ಸಂವಿಧಾನ ಬರೆದವ್ರು!

‘ನೀವೇ ಸಂವಿಧಾನ ಬರೆದವರ ರೀತಿಯಲ್ಲಿ ವರ್ತಿಸುತ್ತಿದ್ದೀರಾ.ತಡಸದಲ್ಲಿ ಪೂರ್ತಿ ಮನೆ ಬಿದ್ದು ಹೋಗಿದ್ದರೂ, ಶೇ 55ರಷ್ಟು ಹಾಳಾಗಿದೆ ಎಂದು ವರದಿ ಕೊಟ್ಟಿದ್ದೀರಾ. ನಿಮ್ಮಿಷ್ಟದಂತೆ ಮಾರ್ಗಸೂಚಿಗಳನ್ನು ತಿದ್ದಿಕೊಂಡಿದ್ದೀರಾ? ನಿಮ್ಮ ಕೈಲಿ ಕೆಲಸ ಮಾಡೋಕೆ ಆಗಲ್ಲ ಅಂದ್ರೆ ಹೇಳಿ. ಬೇರೆ ತಹಶೀಲ್ದಾರ್‌ನ ನೇಮಿಸ್ತೀವಿ’ ಎಂದು ಸವಣೂರು ತಹಶೀಲ್ದಾರ್ ವಿರುದ್ಧವೂ ಗುಡುಗಿದರು.

ದೇವೇಗೌಡರ ಅಂತರಂಗ, ಈಗ ಬಹಿರಂಗ

‘ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಯಾವುದು ದೇವೇಗೌಡರ ಅಂತರಂಗದಲ್ಲಿತ್ತೋ ಅದು ಈಗ ಬಹಿರಂಗವಾಗಿದೆ. ಇದು ಮುಂದಿನ ದಿನದಲ್ಲಿ ರಾಜ್ಯದ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.