ADVERTISEMENT

ನಾಡು–ನುಡಿ ಬಿಂಬಿಸುವ ಸಮ್ಮೇಳನವಾಗಲಿ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನೆ: ಸಚಿವ ಕೋಟ ಆಶಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 14:11 IST
Last Updated 6 ಆಗಸ್ಟ್ 2022, 14:11 IST
ಹಾವೇರಿ ನಗರದ ವಾರ್ತಾ ಭವನದ ಆವರಣದಲ್ಲಿ ಶನಿವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುಷ್ಪ ನಮನ ಸಲ್ಲಿಸಿದರು. ಕಸಾಪ ಅಧ್ಯಕ್ಷ ಮಹೇಶ ಜೋಶಿ, ಶಾಸಕ ನೆಹರು ಓಲೇಕಾರ ಇದ್ದಾರೆ  –ಪ್ರಜಾವಾಣಿ ಚಿತ್ರ 
ಹಾವೇರಿ ನಗರದ ವಾರ್ತಾ ಭವನದ ಆವರಣದಲ್ಲಿ ಶನಿವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುಷ್ಪ ನಮನ ಸಲ್ಲಿಸಿದರು. ಕಸಾಪ ಅಧ್ಯಕ್ಷ ಮಹೇಶ ಜೋಶಿ, ಶಾಸಕ ನೆಹರು ಓಲೇಕಾರ ಇದ್ದಾರೆ  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಸಿಎಂ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ದೇಶಕ್ಕೆ ಮಾದರಿಯಾಗುವಂತೆ ನಡೆಸಬೇಕು. ಕನ್ನಡ ಗೌರವ ಹೆಚ್ಚಿಸುವ ಕೆಲಸವಾಗಬೇಕು. ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ’ ಎಂದುಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ವಾರ್ತಾ ಭವನದ ಆವರಣದಲ್ಲಿ ಶನಿವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೊನಾ ಕಾರಣದಿಂದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಈಗ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ₹20 ಕೋಟಿ ಅನುದಾನ ಮಂಜೂರು ಮಾಡಿದೆ. ಕನ್ನಡ ನಾಡು-ನುಡಿ, ಕಲೆ– ಸಂಸ್ಕೃತಿ ಕಳೆಗಟ್ಟುವ ರೀತಿ ಯಶಸ್ವಿಯಾಗಿ ಸಮ್ಮೇಳನವನ್ನು ಆಯೋಜಿಸಬೇಕು ಎಂದರು.

ADVERTISEMENT

ಕಸಾಪ ಕಟ್ಟಡಕ್ಕೆ ಜಾಗ ಖರೀದಿ:

ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟಿಸಿದ ಶಾಸಕ ನೆಹರು ಓಲೇಕಾರ ಮಾತನಾಡಿ, ಸ್ಥಳ ವಿವಾದದಿಂದ ಸಮ್ಮೇಳನ ಒಮ್ಮೆ ಕೈತಪ್ಪಿ ಹೋಗಿತ್ತು. ನಂತರ ಹಾವೇರಿ ಜಿಲ್ಲೆಗೆ ಆತಿಥ್ಯ ಕೊಡಬಾರದು ಎಂಬ ಮಾತುಗಳು ಕೇಳಿಬಂದಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಸಾಪ ಪದಾಧಿಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಭೇಟಿ ಮಾಡಿದ ಫಲವಾಗಿ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡಕ್ಕೆ ಈಗಾಗಲೇ ನಾಲ್ಕು ಗುಂಟೆ ಜಾಗ ಖರೀದಿಸಲಾಗಿದೆ. ಬರುವ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.

‘ಸಮ್ಮೇಳನದ ಪ್ರಚಾರಕ್ಕೆ ಶೀಘ್ರವೇ ಆ್ಯಪ್‌’

ಹಾವೇರಿಯಲ್ಲಿ ನಡೆಯುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಶೀಘ್ರವೇ ಆ್ಯಪ್‌ ಬಿಡುಗಡೆ ಮಾಡಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ‘ಕನ್ನಡ ರಥ’ ಸಂಚರಿಸಲಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ದೂಳು ಮುಕ್ತ, ಪ್ಲಾಸ್ಟಿಕ್ಟ್ ಮುಕ್ತ ಸಮ್ಮೇಳನ ನಡೆಸಲಾಗುವುದು. ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಾಲಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಗುಣಾತ್ಮಕ ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗುವುದು. ಈ ಸಮ್ಮೇಳನದಲ್ಲಿ 86 ಪುಸ್ತಕಗಳನ್ನು ಹೊರತರಲಾಗುವುದು. ಈ ಪೈಕಿ 37 ಪುಸ್ತಕಗಳು ಹಾವೇರಿಗೆ ಸಂಬಂಧಪಟ್ಟದ್ದಾಗಿವೆ. ಈ ಪುಸ್ತಕಗಳನ್ನು 80 ಪುಟಗಳಿಗೆ ಸೀಮಿತಗೊಳಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಆದ್ಯತೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಗೌರವ ಕೋಶಾಧ್ಯಕ್ಷ ಎಸ್.ಎನ್.ದೊಡ್ಡಗೌಡರ, ಕಾರ್ಯದರ್ಶಿ ಬಿ.ಪಿ.ಶಿಡೇನೂರ ಇದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ. ಆಲದಕಟ್ಟಿ ವಂದಿಸಿದರು.

**

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ. ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲು ಒಪ್ಪಿಗೆ ನೀಡಿದ್ದಾರೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ

**

ಕುಡಿಯುವ ನೀರು, ಬೀದಿದೀಪ, ಉತ್ತಮ ರಸ್ತೆ ಸೇರಿದಂತೆ ಎಲ್ಲ ಮೂಲಸೌಕರ್ಯ ಒದಗಿಸಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ನಗರಸಭೆ ಎಲ್ಲ ರೀತಿಯ ಸಹಕಾರ ನೀಡಲಿದೆ
– ಸಂಜೀವಕುಮಾರ ನೀರಲಗಿ, ಹಾವೇರಿ ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.